ನವ ದೆಹಲಿ: ತಮಿಳುನಾಡಿಗೆ ಮೇ ತಿಂಗಳಲಿ 2.5 ಟಿಎಂಸಿ ನೀರನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರಕಾರಕ್ಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮಂಗಳವಾರ ನಿರ್ದೇಶಿಸಿದೆ.
ಫೆಬ್ರವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು ಪ್ರತಿ ತಿಂಗಳು ತನಗೆ 2.5 ಟಿಎಂಸಿ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ತಮಿಳುನಾಡು ಕಳೆದ ಫೆಬ್ರವರಿಯಲ್ಲಿ ನಡೆದ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಆಗ್ರಹಿಸಿತ್ತು.
ಇತ್ತೀಚೆಗೆ ನಡೆದ ಕಾವೇರಿ ನಿರ್ವಹಣಾ ಸಮಿತಿ (ಸಿಡಬ್ಲ್ಯುಆರ್‌ಸಿ) ಸಭೆಯಲ್ಲಿಯೂ ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುಗಡೆಗೊಳಿಸುವಂತೆ ಸೂಚಿಸಿತ್ತು.
ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ, ಕೊಡಗಿನಲ್ಲಿ ಮಳೆ ಚೆನ್ನಾಗಿ ಸುರಿಯುತ್ತಿರುವುದರಿಂದ ಕೆಆರ್‌ಎಸ್ ಅಣೆಕಟ್ಟಿಗೆ ಒಳಹರಿವು ಹೆಚ್ಚಿದೆ. ಇದೆಲ್ಲಾ ಅಂಶವನ್ನು ಗಮನದಲ್ಲಿರಿಸಿಕೊಂಡು ಸಿಡಬ್ಲ್ಯುಆರ್‌ಎ ಈ ಆದೇಶವನ್ನು ಹೊರಡಿಸಿದೆಯೆನ್ನಲಾಗಿದೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಪ್ರಮುಖ ಅಣೆಕಟ್ಟುಗಳಲ್ಲಿ 19.17 ಟಿಎಂಸಿ ನೀರಿದೆ. ಸದ್ಯಕ್ಕೆ ಆರು ಟಿಎಂಸಿ ನೀರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ತಮಿಳುನಾಡು ಇಂದು ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ವಾದ ಮಂಡಿಸಿತ್ತು.
ಆದರೆ ಇದನ್ನು ಒಪ್ಪದ ಕರ್ನಾಟಕವು, ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳು ಬತ್ತಿಹೋಗಿವೆ. ಹೀಗಾಗಿ ಮುಂಗಾರು ಸಾಮಾನ್ಯವಾಗಿದ್ದರೆ ಮಾತ್ರ ನೀರನ್ನು ಬಿಡಲು ಸಾಧ್ಯ. ಇಲ್ಲದಿದ್ದರೆ ನೀರು ಬಿಡಲಾಗದು ಎಂದು ವಾದಿಸಿತ್ತು.
ಅಂತಿಮವಾಗಿ ಸಿಡಬ್ಲ್ಯುಎಂಎ, ತಮಿಳುನಾಡಿಗೆ ಮೇ ತಿಂಗಳ ಪಾಲಿನ 2.5 ಟಿಎಂಸಿ ನೀರನ್ನು ಹರಿಸಬೇಕೆಂದು ಕರ್ನಾಟಕ್ಕೆ ಆದೇಶಿಸಿತು.