ಬೆಂಗಳೂರು: ಇದುವರೆಗೆ ರಾತ್ರಿ ಸಮಯಕ್ಕೆ ಸೀಮಿತವಾಗಿದ್ದ ಕಳ್ಳತನಗಳು ಇದೀಗ ಹಗಲು ಹೊತ್ತಲ್ಲೇ ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನೆಲಮಂಗಲದ ಜನನಿ ಬೀಡ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ, ಅಪರಿಚಿತ ಕಳ್ಳರು ಮನೆ ಒಡೆದು ಸುಮಾರು ₹30 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಕಳ್ಳರು ಒಂದೇ ಸಮಯದಲ್ಲಿ ಮೂರು ಮನೆಗಳಿಗೆ ಪ್ರವೇಶಿಸಲು ಯತ್ನಿಸಿದ್ದು, ಮೊದಲ ಎರಡು ಮನೆಗಳಲ್ಲಿ ಜನರ ಚಲನವಲನ ಕಂಡು ಹಿಂತಿರುಗಿದ್ದಾರೆ. ಆದರೆ ಮೂರನೇ ಮನೆಯಲ್ಲಿ ಯಶಸ್ವಿಯಾಗಿ ಪ್ರವೇಶಿಸಿದ ಅವರು, ಕಬ್ಬಿಣದ ಲಾಕ್ ಮತ್ತು ಬಾಗಿಲನ್ನು ಒಡೆದು ಒಳಗೆ ನುಗ್ಗಿದ್ದಾರೆ.
ಈ ಮನೆಯಿಂದ ಸುಮಾರು ₹4.5 ಲಕ್ಷ ನಗದು ಹಾಗೂ 190 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಅಂದಾಜಿಸಲಾಗಿದ್ದು, ಒಟ್ಟು ಮೌಲ್ಯ ₹30 ಲಕ್ಷದಷ್ಟು ಆಗಿದೆ. ಅತ್ಯಂತ ಆತಂಕಕಾರಿ ಸಂಗತಿ ಎಂದರೆ, ಕೇವಲ ನಾಲ್ಕು ನಿಮಿಷಗಳಲ್ಲಿ ಈ ದರೋಡೆ ನಡೆಸಿ ಕಳ್ಳರು ಸ್ಥಳದಿಂದ ಎಸ್ಕೇಪ್ ಆಗಿರುವುದು.
ಮನೆ ಮಾಲೀಕರು ತಿಳಿಸಿದಂತೆ, ಕುಟುಂಬವು ದಿನನಿತ್ಯದ ಕೆಲಸ, ಶಾಪಿಂಗ್ ಮತ್ತು ಇತರ ಕಾರ್ಯಗಳಿಗೆ ಬೆಳಿಗ್ಗೆ 9.30–10 ಗಂಟೆಯೊಳಗೆ ಮನೆಯಿಂದ ಹೊರಟಿತ್ತು. ಸಂಜೆ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಕಳ್ಳರ ಮೋಡಸ್ ಆಪರ್ಯಾಂಡಿ ಅಧ್ಯಯನ ಮತ್ತು ಶಂಕಿತರ ಪತ್ತೆಗೆ ತನಿಖೆ ಮುಂದುವರಿದಿದೆ. ಹಗಲು ಹೊತ್ತಲ್ಲೇ ಜನ ಸಂಚಾರ ಇರುವ ಪ್ರದೇಶದಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಸಾರ್ವಜನಿಕ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಲು ಮತ್ತು ಕಳ್ಳತನ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
