ಬೆಂಗಳೂರು:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾರ್ಯದರ್ಶಿಯಾಗಿ ನೇಮಕವಾಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿನಂದಿಸಿದರು.
ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ಆರ್ಯವೈಶ್ಯ ಸಭಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಕುಲ್ ಅವರನ್ನು ಡಿಸಿಎಂ ಗೌರವಿಸಿದರಲ್ಲದೆ, ರಾಷ್ಟ್ರ ಮಟ್ಟದಲ್ಲಿ ನಮ್ಮ ರಾಜ್ಯದ ಕೇಡರಿನ ಐಎಎಸ್ ಅಧಿಕಾರಿಗಳು ಉತ್ತಮ ಸಾಧನೆ ಮಾಡಲಿ. ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆಯಿಂದ ಎಲ್ಲರಿಗೂ ಮಾದರಿಯಾಗಲಿ. ನಕುಲ್ ಅವರೂ ಇಂಥ ಮಾದರಿ ವ್ಯಕ್ತಿತ್ವವುಳ್ಳ ಅಧಿಕಾರಿ ಎಂದು ಶ್ಲಾಘಿಸಿದರು.
ಕೇಂದ್ರದ ಹಣಕಾಸು ಇಲಾಖೆಯನ್ನು ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಪ್ರಾಮಾಣಿಕ-ದಕ್ಷ ಸೇವಾ ಹಿನ್ನೆಲೆ ಇದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೂ ನಕುಲ್ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ ಆಗಿಯೂ ದಕ್ಷವಾಗಿ ಕೆಲಸ ಮಾಡಿದ್ದಾರೆಂದು ಉಪ ಮುಖ್ಯಮಂತ್ರಿ ಹೇಳಿದರು.
ಸದ್ಯಕ್ಕೆ, ದೇಶವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ರೂಪಿಸಲು ನರೇಂದ್ರ ಮೋದಿ ಅವರ ಸರಕಾರ ಅಹರ್ನಿಷಿ ಕೆಲಸ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಆರ್ಥಿಕ ಇಲಾಖೆ ಪಾತ್ರ ಬಹಳ ದೊಡ್ಡದು. ಅಂಥ ಇಲಾಖೆಗೆ ನಕುಲ್ ಹೋಗುತ್ತಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಡಿಸಿಎಂ ನುಡಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕರ್ನಾಟಕ ಆರ್ಯವೈಶ್ಯ ಸಭಾ ಅಧ್ಯಕ್ಷ ರವಿಶಂಕರ್ ಮತ್ತಿತರೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.