ಬೆಂಗಳೂರು, ಜ.08: ಕರ್ನಾಟಕ ಉಪಮುಖ್ಯಮಂತ್ರಿ D. K. Shivakumar ಅವರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿಲೀನ ಸಾಧ್ಯತೆ ಕುರಿತು ಮಹತ್ವದ ಸೂಚನೆ ನೀಡಿದ್ದು, ಇದು ರಾಜ್ಯದ ರಾಜಕೀಯದಲ್ಲಿನ ಗೊಂದಲವನ್ನು ನಿವಾರಿಸಲಿದೆ ಎಂದು ಹೇಳಿದರು.
“ಕುಮಾರಸ್ವಾಮಿ ಅವರ ಧೋರಣೆ ನೋಡಿದರೆ, ಜೆಡಿಎಸ್ ಪಕ್ಷ ಶೀಘ್ರದಲ್ಲೇ Bharatiya Janata Party ಜತೆ ವಿಲೀನವಾಗುವ ಸಾಧ್ಯತೆ ಇದೆ. ವಿಲೀನವಾದರೆ ನಮಗೂ ಒಳ್ಳೆಯದೇ. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ. ನಾವೂ ನೇರವಾಗಿ ಬಿಜೆಪಿಯೊಂದಿಗೆ ಹೋರಾಟ ಮಾಡಬಹುದು,” ಎಂದು ಶಿವಕುಮಾರ್ ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಗೋವಿಂದರಾಜ್, ಅವರ ಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಮಾಜಿ ಅಧ್ಯಕ್ಷ ಡೇವಿಡ್ ಸೇರಿದಂತೆ ನೂರಾರು ಮುಖಂಡರನ್ನು Indian National Congress ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: ಬಿಜೆಪಿ ಜೊತೆ ವಿಲೀನ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು; 2028ರಲ್ಲಿ NDA 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು
“ಗೋವಿಂದರಾಜ್ ಅವರು ನಮ್ಮ ಕುಟುಂಬದ ಸ್ನೇಹಿತರು. ಜೆಡಿಎಸ್ ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಯಾಗಿಯೂ ಕೆಲಸ ಮಾಡಿದ್ದಾರೆ. ಆದರೆ Janata Dal (Secular) ಮತ್ತು ಬಿಜೆಪಿಯ ನಡುವಿನ ಹೊಂದಾಣಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಇಂದು ಕಾಂಗ್ರೆಸ್ಗೆ ಸೇರುತ್ತಿದ್ದಾರೆ,” ಎಂದು ಹೇಳಿದರು.
“ನಮ್ಮದು ಜಾತ್ಯಾತೀತ ಸಿದ್ಧಾಂತ. ಜಮೀರ್ ಅಹ್ಮದ್ ಖಾನ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳಲು ಅವರು ತೀರ್ಮಾನಿಸಿದ್ದಾರೆ. ಬಿಜೆಪಿ–ಜೆಡಿಎಸ್ ಬೇಗ ವಿಲೀನವಾದಷ್ಟೂ ನಮಗೇ ಲಾಭ. ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ರಾಜಕೀಯ ಆಡುತ್ತಿದ್ದಾರೆ ಎಂಬುದನ್ನು ಅವರದೇ ನಾಯಕರು ಹೇಳುತ್ತಿದ್ದಾರೆ,” ಎಂದು ಡಿಕೆಶಿ ಹೇಳಿದರು.
ಬರುವ ಬೆಂಗಳೂರು ಪಾಲಿಕೆ ಚುನಾವಣೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಉತ್ಸಾಹವಿದೆ ಎಂದರು.
“ಬೆಂಗಳೂರು ಪಶ್ಚಿಮ 247, ಉತ್ತರ 199, ದಕ್ಷಿಣ 129, ಕೇಂದ್ರ 106 ಮತ್ತು ಪೂರ್ವ 78—ಒಟ್ಟು 779 ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜ.10ರೊಳಗೆ ಅರ್ಜಿ ನೀಡಿದರೆ ವಾರ್ಡ್ ಮಟ್ಟದ ಕಾರ್ಯಕ್ಷಮತೆ ಮತ್ತು ನಿಷ್ಠೆ ಪರಿಶೀಲಿಸಲು ನಮಗೆ ಅನುಕೂಲವಾಗುತ್ತದೆ,” ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯವರೇ ಸ್ವಾಗತಿಸುತ್ತಿದ್ದಾರೆ ಎಂದು ಅವರು ಹೇಳಿದರು. “ಕುಡಿಯುವ ನೀರಿನ ಸಮಸ್ಯೆ ಪರಿಹಾರ, ರಸ್ತೆ ನಿರ್ಮಾಣ, ಖಾತಾ ಪರಿವರ್ತನೆ ಮತ್ತು ಆಸ್ತಿ ದಾಖಲೆಗಳ ಸರಿಪಡಿಸುವ ಕೆಲಸ ನಡೆಯುತ್ತಿದೆ. ‘ಫ್ರೆಂಡ್ಲಿ ಫೈಟ್’ ಹೇಳಿಕೆಗಳಿಂದ ಕಾರ್ಯಕರ್ತರಿಗೆ ಗೊಂದಲ ಸೃಷ್ಟಿಸಬೇಡಿ. ಒಟ್ಟಾಗಿ ಅಥವಾ ವಿಲೀನವಾಗಿ ನೇರ ಹೋರಾಟಕ್ಕೆ ಬನ್ನಿ—ನಾವು ಸಿದ್ಧ,” ಎಂದು ಸವಾಲು ಹಾಕಿದರು.
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಈ ವರ್ಷವನ್ನು ಚುನಾವಣಾ ವರ್ಷ ಎಂದು ಪರಿಗಣಿಸಲಾಗಿದೆ. “ಕಾನೂನು ಅಡೆತಡೆ ನಿವಾರಣೆಗೆ ತೀರ್ಮಾನಿಸಲಾಗಿದೆ. ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು,” ಎಂದು ಡಿಕೆಶಿ ಹೇಳಿದರು.
ಕೊನೆಗೆ, ಪಕ್ಷ ಬದಲಾವಣೆ ಕುರಿತು ಎಚ್ಚರಿಕೆ ನೀಡಿದ ಅವರು, “ಜೆಡಿಎಸ್ಗೆ ಸ್ಪಷ್ಟ ಸಿದ್ಧಾಂತವಿಲ್ಲ. ಕಾಂಗ್ರೆಸ್ಗೆ ಬಂದವರು ಒಗ್ಗಟ್ಟಾಗಿ ಶ್ರಮಿಸಿ, ಜನಸೇವೆ ಮಾಡಿ, ಪಕ್ಷವನ್ನು ಬಲಪಡಿಸಬೇಕು,” ಎಂದು ಹೇಳಿದರು.
