Home ರಾಜಕೀಯ ಕನಕಪುರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಕೆಲಸ ಮಾಡದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಡಿಸಿಎಂ ಶಿವಕುಮಾರ್

ಕನಕಪುರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಕೆಲಸ ಮಾಡದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಡಿಸಿಎಂ ಶಿವಕುಮಾರ್

15
0
DK Shivakumar public grievance at Kanakapura

ಕನಕಪುರ (ಬೆಂಗಳೂರು), ಆ. 10: ಜಮೀನು ಖಾತೆ ಸಮಸ್ಯೆ, ಭೂ ವ್ಯಾಜ್ಯ, ಮನೆ ಖಾತೆ, ನಿವೇಶನ, ಗುತ್ತಿಗೆ ಆಧಾರದ ಮೇಲೆ, ಅನುಕಂಪದ ಆಧಾರದ ಮೇಲೆ ಉದ್ಯೋಗ, ಹಾಸ್ಟೆಲ್ ಸೀಟು, ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಸಮಸ್ಯೆಗಳ ಅರ್ಜಿ ಹೊತ್ತು ಬಂದಿದ್ದ ನೂರಾರು ಜನರ ಅಹವಾಲುಗಳನ್ನು ಕನಕಪುರ ಕ್ಷೇತ್ರದ ಶಾಸಕ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ವೀಕರಿಸಿ, ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಪ್ರತಿ ಎರಡನೇ ಹಾಗೂ ನಾಲ್ಕನೆ ಶನಿವಾರ ಮೀಸಲಿಡುವುದಾಗಿ ಹೇಳಿದ್ದ ಶಿವಕುಮಾರ್ ಅವರು ತಮ್ಮ ಮಾತಿನಂತೆ ಕನಕಪುರದ ನಿವಾಸದ ಬಳಿ ಶನಿವಾರ ಜನರ ಕಷ್ಟಗಳನ್ನು ಆಲಿಸಿದರು.

“ನಿವೇಶನವನ್ನು ಖಾತೆ ಮಾಡಿಕೊಡಲು ಸತಾಯಿಸುತ್ತಾ ಇದ್ದೀರಂತೇ? ಸಾರ್ವಜನಿಕರು ನನ್ನ ಮೊಬೈಲ್ ಗೆ ಸಂದೇಶ ಕಳುಹಿಸುತ್ತಿದ್ದಾರೆ, ಕರೆ ಮಾಡಿ ಕಷ್ಟ ಹೇಳಿಕೊಳ್ಳುತ್ತಿದ್ದಾರೆ, ಕಚೇರಿಯಲ್ಲಿ ಏನು ಕೆಲಸ ಮಾಡುತ್ತಿದ್ದೀರಿ? ಜನರನ್ನು ಬೆಳಗ್ಗೆ, ಸಾಯಂಕಾಲ ತಿರುಗಿಸುತ್ತಾ ಇದ್ದೀರಾ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾರು?” ಎಂದು ಶಿವಕುಮಾರ್ ಅವರು ತಾಲ್ಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಹಿಳೆಯೊಬ್ಬರು ಸ್ವಾಮಿ ತಾವು ನೀಡಿದ ನಿವೇಶನದ ಖಾತೆ ಮಾಡಿಕೊಡಲು ಅಲೆಸುತ್ತಿದ್ದಾರೆ ಎಂದು ದೂರು ನೀಡಿದಾಗ “ಕಾನೂನು ಬದ್ಧವಾಗಿದ್ದರೆ ಯಾವುದೇ ಅರ್ಜಿಗಳನ್ನು ಒಂದು ದಿನದ ಮೇಲೆ ಇಟ್ಟುಕೊಳ್ಳಬಾರದು. ಸಂಬಂಧಪಟ್ಟ ಅಧಿಕಾರಿ ಮತ್ತು ಕೇಸ್ ವರ್ಕರ್ ಗಳಿಗೆ ಸೂಚನೆ ನೀಡಿ” ಎಂದಾಗ “ಇನ್ನೆರಡು ದಿನದಲ್ಲಿ ಈ ಸಮಸ್ಯೆಯನ್ನು ಪರಿಹರಿಸುತ್ತೇವೆ. ಕೆಲಸ ಬಾಕಿ ಇರಿಸಿಕೊಳ್ಳುವುದಿಲ್ಲ” ಎಂದು ಅಧಿಕಾರಿ ಡಿಸಿಎಂ ಅವರಿಗೆ ತಿಳಿಸಿದರು.

“ಇನ್ನು ಮುಂದೆ ಈ ರೀತಿಯ ಸಮಸ್ಯೆಗಳನ್ನು ಹೊತ್ತುಕೊಂಡು ಜನರು ನನ್ನ ಬಳಿ ಬರಬಾರದು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಮನೆ ಮತ್ತು ನಿವೇಶನ ಬೇಕು ಎಂದು ಅರ್ಜಿ ಸಲ್ಲಿಸಿದವರಿಗೆ “ಮನೆ ಮತ್ತು ನಿವೇಶನಕ್ಕಾಗಿಯೇ ಪ್ರತ್ಯೇಕ ಅರ್ಜಿ ನಮೂನೆಯನ್ನು ಕೊಡಲಾಗುವುದು. ಆಗ ಸಮಸ್ಯೆ ಇರುವ ಸಾರ್ವಜನಿಕರು ಅರ್ಜಿ ಹಾಕಬಹುದು” ಎಂದರು.

ನೀವು ಕೊಟ್ಟಿರುವ ಮನೆ ಮಹಿಳೆಗೆ ಸಿಗುತ್ತದೆಯೋ, ಇಲ್ಲವೋ ಎಂದು ವಯೋ ವೃದ್ಧರೊಬ್ಬರು ಮನವಿ ಸಲ್ಲಿಸಿದಾಗ, ಅವರ ಅರ್ಜಿಯನ್ನು ಪರಿಶೀಲಿಸಿದ ಡಿಸಿಎಂ ಅವರು “ಹೆದರಬೇಡಿ, ನಿಮಗೆ ಮನೆ ದೊರೆಯುತ್ತದೆ. ಸ್ವಲ್ಪ ದಿನದಲ್ಲಿ ನಿಮ್ಮ ಹೆಸರಿಗೆ ಆಗುತ್ತದೆ” ಎಂದು ಭರವಸೆ ನೀಡಿದರು.

ಕಂಪ್ಯೂಟರ್ ಸೈನ್ಸ್ ಓದಬೇಕು, ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಕೊಡಿಸಿ ಇಂದು ವಿದ್ಯಾರ್ಥಿನಿಯೊಬ್ಬರು ಮನವಿ ಸಲ್ಲಿಸಿದಾಗ “ನಾಗಮಂಗಲದಲ್ಲಿ ಓದಬಹುದಾ? ಚುಂಚನಗಿರಿ ಸ್ವಾಮೀಜಿಯವರಿಗೆ ಲೆಟರ್ ಹಾಕಿಸುತ್ತೇವೆ. ಹೋಗಿ ಕಾಲೇಜಿನವರನ್ನು ಸಂಪರ್ಕಿಸಿ. ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ. ಮುಂದೆ ಚೆನ್ನಾಗಿ ಓದು, ಒಳ್ಳೆಯದಾಗಲಿ” ಎಂದರು.

ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿನಿಯೊಬ್ಬರು ತಾಲೂಕಿನ ಯಾವುದಾದರೂ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸಿ ಎಂದು ಮನವಿ ಮಾಡಿದಾಗ, ಸಂಬಂಧಪಟ್ಟ ಅಧಿಕಾರಿಗೆ ಅರ್ಜಿಯನ್ನು ನೀಡಿ “ಕೂಡಲೇ ಈ ಹುಡುಗಿಗೆ ಕೆಲಸ ಕೊಡಿಸಿ” ಎಂದು ಆದೇಶಿಸಿದರು.

ಆಸ್ತಿ ವ್ಯಾಜ್ಯ ಸಂಬಂಧ ಸಮಸ್ಯೆ ಬಗೆಹರಿಸಿ ಎಂದು ಮನವಿ ಸಲ್ಲಿಸಿದವರಿಗೆ, “ಆಸ್ತಿ ವ್ಯಾಜ್ಯ ಇಟ್ಟುಕೊಂಡು ಕೋರ್ಟು, ಕಚೇರಿಗೆ ಏಕೆ ಅಲೆಯುತ್ತೀರಿ? ರಾಜಿ ಪಂಚಾಯಿತಿ ಮಾಡಿಕೊಂಡು ನಿಮ್ಮ ನಿಮ್ಮಲ್ಲೇ ಬಗ್ಗೆ ಹರಿಸಿಕೊಳ್ಳಿ. ಅಧಿಕಾರಿಗಳಿಗೆ ಮತ್ತು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಶೀಘ್ರ ಬಗೆಹರಿಸಿಕೊಳ್ಳಿ” ಎಂದು ಸಲಹೆ ನೀಡಿದರು.

ಜನರ ಕಷ್ಟ ನಿವಾರಣೆಗಾಗಿ ನಾನೇ ಕ್ಷೇತ್ರಕ್ಕೆ ಬರುತ್ತಿದ್ದೇನೆ

ಜನಸ್ಪಂದನ ಕಾರ್ಯಕ್ರಮದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಅವರು, “ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರ ಕನಕಪುರಕ್ಕೆ ಭೇಟಿ ನೀಡುತ್ತೇನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ತಾಲೂಕಿನ ಜನ ತಮ್ಮ ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಬಂದು ಅಹವಾಲು ಹೇಳಿಕೊಳ್ಳಬಹುದು” ಎಂದು ತಿಳಿಸಿದರು.

“ಬೆಂಗಳೂರಿಗೆ ಭೇಟಿ ಮಾಡಲು ಬಂದಾಗ ನಾನು ಸಭೆ, ಸಮಾರಂಭ, ಪ್ರವಾಸದಲ್ಲಿರುತ್ತೇನೆ. ಅದರಿಂದ ಕ್ಷೇತ್ರದ ಹಾಗೂ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ನಾನೇ ಇಲ್ಲಿಗೆ ಬಂದು ಭೇಟಿ ಮಾಡಲು ತೀರ್ಮಾನಿಸಿದ್ದೇನೆ” ಎಂದರು.

“ಚನ್ನಪಟ್ಟಣದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದಂತೆ ಇಲ್ಲಿಯೂ ಜನ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಕೇಳಿದಾಗ, “ಇಲ್ಲಿ ಈಗಾಗಲೇ ನಾನು 100 ಎಕರೆಯಷ್ಟು ಜಾಗದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಿದ್ದೇನೆ. ರಾಮನಗರದಲ್ಲೂ ಬಡವರಿಗೆ ನೀಡಲು ನಿವೇಶನ ಸಿದ್ಧ ಮಾಡಲಾಗುತ್ತಿದೆ. ಚನ್ನಪಟ್ಟಣದಲ್ಲಿ 112 ಎಕರೆಯಷ್ಟು ಜಮೀನು ಗುರುತಿಸಲಾಗಿದೆ . ಅಗತ್ಯ ಬಿದ್ದರೆ ಜಮೀನು ಖರೀದಿ ಮಾಡುತ್ತೇವೆ. ಖಾಸಗಿಯವರು ಜಮೀನು ನೀಡಲು ಮುಂದೆ ಬಂದರೆ ಮಾರುಕಟ್ಟೆ ದರದಲ್ಲಿ ಮಾರ್ಗಸೂಚಿ ಅನುಸಾರ ಹಣ ನೀಡಿ ಖರೀದಿ ಮಾಡಲಾಗುವುದು” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here