
ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರ ಸಂಘದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ನಾಳೆ ಚರ್ಚೆಗೆ ಆಹ್ವಾನಿಸಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಡಿಸಿಎಂ ಕಚೇರಿಯಿಂದ ಆಹ್ವಾನ ಬಂದಿರುವುದಾಗಿ ದೃಢಪಡಿಸಿ, “ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಭರವಸೆಗಳ ಮೇಲೆ ನಾವು ಬದುಕುತ್ತಿದ್ದೇವೆ. ಇಬ್ಬರೂ ಬಾಕಿ ಪಾವತಿ ಒಮ್ಮೆಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ಹಣ ಬಿಡುಗಡೆ ಆಗಿಲ್ಲ. ಡಿಸೆಂಬರ್ ಒಳಗೆ ಬಾಕಿ ಪಾವತಿಯಾಗದಿದ್ದರೆ ರಾಜ್ಯವ್ಯಾಪಿ ಹೋರಾಟ ಆರಂಭಿಸುತ್ತೇವೆ,” ಎಂದು ಎಚ್ಚರಿಸಿದರು.

ಡಿಸೆಂಬರ್ ಡೆಡ್ಲೈನ್: ಹೋರಾಟದ ಎಚ್ಚರಿಕೆ
ಗುತ್ತಿಗೆದಾರರ ಸಂಘವು ಸರ್ಕಾರದ ವಿರುದ್ಧ ಕಠಿಣ ನಿಲುವು ತಾಳಿದ್ದು, “ಎರಡು ವರ್ಷಗಳಿಂದ ನಾವು ಕಾಯುತ್ತಿದ್ದೇವೆ. ಡಿಸೆಂಬರ್ ತನಕ ಕಾಯುತ್ತೇವೆ. ಅದಾದ ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಲಸ ನಿಲ್ಲಿಸಿ ಉಗ್ರ ಹೋರಾಟ ನಡೆಸುತ್ತೇವೆ,” ಎಂದು ಘೋಷಿಸಿದೆ.
ಮಂಜುನಾಥ್ ಅವರ ಪ್ರಕಾರ, ನೀರಾವರಿ ಇಲಾಖೆ ₹12,000 ಕೋಟಿ, ಪಿಆರ್ಡಿ ₹3,600 ಕೋಟಿ, ಸಣ್ಣ ನೀರಾವರಿ ₹3,200 ಕೋಟಿ, ನಗರಾಭಿವೃದ್ಧಿ ₹2,000 ಕೋಟಿ, ಹೌಸಿಂಗ್ ಬೋರ್ಡ್ ₹1,200 ಕೋಟಿ, ಹಾಗೂ ಕಾರ್ಮಿಕ ಇಲಾಖೆ ₹800 ಕೋಟಿ ಸೇರಿ ಒಟ್ಟು ₹33,000 ಕೋಟಿ ಬಾಕಿ ಉಳಿದಿದೆ.
‘ಕೋರ್ಟ್ಗೆ ಹೋಗಲಿ’ ಎಂದ ಸಿಎಂ ಹೇಳಿಕೆ ವಿವಾದಕ್ಕೆ ಕಾರಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಕೋರ್ಟ್ಗೆ ಹೋಗಲಿ” ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಕೋರ್ಟ್ಗೆ ಹೋಗಲ್ಲ, ಹೋರಾಟ ಮಾಡ್ತೀವಿ. ಈಗ ಸಣ್ಣ ಗುತ್ತಿಗೆದಾರರು ಆತ್ಮಹತ್ಯೆ ಯೋಚಿಸುವ ಪರಿಸ್ಥಿತಿ ಬಂದಿದೆ,” ಎಂದು ಮಂಜುನಾಥ್ ಭಾವುಕವಾಗಿ ಹೇಳಿದ್ದಾರೆ.

40% ಆರೋಪದಿಂದ 60% ಅಸಮಾಧಾನಕ್ಕೆ
ಬಿಜೆಪಿ ಸರ್ಕಾರದ ಕಾಲದಲ್ಲಿ 40% ಕಮಿಷನ್ ಆರೋಪ ಎತ್ತಿದ್ದ ಗುತ್ತಿಗೆದಾರರು, ಈಗ ಕಾಂಗ್ರೆಸ್ ಸರ್ಕಾರದಲ್ಲಿಯೂ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. “ನಾವು 60% ಅಥವಾ 80% ಎಂದಿಲ್ಲ, ಆದರೆ ಕಮಿಷನ್ ಪ್ರಕ್ರಿಯೆ ಹೆಚ್ಚಾಗಿದೆ,” ಎಂದು ಅವರು ಹೇಳಿದರು.
ಡಿಸಿಎಂ ಮಧ್ಯಸ್ಥಿಕೆ: ಪರಿಹಾರಕ್ಕೆ ನಿರೀಕ್ಷೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಧ್ಯಸ್ಥಿಕೆ ಈ ಗೊಂದಲಕ್ಕೆ ತಾತ್ಕಾಲಿಕ ಪರಿಹಾರ ನೀಡಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ನಗರಾಭಿವೃದ್ಧಿ ಇಲಾಖೆಯ ಮೂಲಗಳ ಪ್ರಕಾರ, ಡಿಸಿಎಂ ಅವರು ಬಾಕಿ ಪಾವತಿ ಸಮಸ್ಯೆ ಪರಿಹರಿಸಿ, ಹೋರಾಟ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.