ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಬಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಬಿಎ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ. ಬಿಎಸ್ಡಬ್ಲ್ಯೂಎಂಎಲ್ ಸಿಇಒ ಕರೇಗೌಡ ಅವರನ್ನು ಒಟಿಒ ಪ್ರಕ್ರಿಯೆಯನ್ನು ಕೇಂದ್ರೀಯವಾಗಿ ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025 ಪ್ರಕಟವಾದ ನಂತರ ನಡೆದ ವೇಗದ ಆಡಳಿತಾತ್ಮಕ ಬೆಳವಣಿಗೆಗಳು ಇದೀಗ ವಿಧಾನಸೌಧ ಮತ್ತು ವಿಕಾಸಸೌಧದ ದಂಡೆಗಳಲ್ಲಿ ಚರ್ಚೆಗೆ ಕಾರಣವಾಗಿವೆ.
ಜನವರಿ 13, 2026ರಂದು ಈ ನಿಯಮಗಳು ಅಧಿಕೃತವಾಗಿ ಜಾರಿಯಾದವು. ಅದರ ಕೆಲವೇ ದಿನಗಳಲ್ಲಿ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಜನವರಿ 27, 2026ರಂದು ಟಿಪ್ಪಣಿ ದಾಖಲಿಸಿ ನಿಯಮ 8ರಡಿಯಲ್ಲಿ ಲೆಗಸಿ ಜಾಹೀರಾತುಗಳಿಗೆ ನೀಡಿರುವ One Time Opportunity (OTO) ಜಾರಿಗೆ ವೇಗ ನೀಡುವಂತೆ ಸೂಚಿಸಿದರು.
ಅದಾದ ಬಳಿಕ ಫೆಬ್ರವರಿ 4, 2026ರಂದು ಸರ್ಕಾರ ಆದೇಶ ಹೊರಡಿಸಿ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ, ಭಾ.ಆ.ಸೇ ಅವರನ್ನು OTO ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಈ ಕ್ರಮದ ವೇಗ ರಾಜಕೀಯ ಹಾಗೂ ಆಡಳಿತ ವಲಯಗಳಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದೆ.


“ಲೆಗಸಿ ಜಾಹೀರಾತು” ಎಂದರೆ ಏನು?
ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025 ಪ್ರಕಾರ:
ಲೆಗಸಿ ಜಾಹೀರಾತು ಎಂದರೆ BBMP Advertisement Bye Laws, 2006 ಅಡಿಯಲ್ಲಿ ಅನುಮತಿ ಪಡೆದು ಖಾಸಗಿ ಅಥವಾ ಸಾರ್ವಜನಿಕ ಆಸ್ತಿಗಳ ಮೇಲೆ ಪ್ರದರ್ಶಿಸಲಾದ ವಾಣಿಜ್ಯ ಜಾಹೀರಾತುಗಳು ಅಥವಾ ಹೋರ್ಡಿಂಗ್ಗಳು, ಮತ್ತು ಅವು:
- BBMP ಜೊತೆ ಮಾನ್ಯ ಒಪ್ಪಂದ ಹೊಂದಿರಬೇಕು; ಅಥವಾ
- 01-01-2016ರ ವೇಳೆಗೆ ಮಾನ್ಯ ಅನುಮತಿ ಹೊಂದಿರಬೇಕು; ಅಥವಾ
- 06-08-2015 ಅಥವಾ 09-10-2015ರ BBMP ಪತ್ರಿಕಾ ಜಾಹೀರಾತುಗಳಿಗೆ ಪ್ರತಿಕ್ರಿಯಿಸಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ ರಸೀದಿ ಹೊಂದಿರಬೇಕು.
ಇದಲ್ಲದೆ,
- 31-12-2015ರವರೆಗೆ ಜಾಹೀರಾತು ತೆರಿಗೆ ಪಾವತಿಸಿಕೊಂಡಿರಬೇಕು,
- ಬಾಕಿ ತೆರಿಗೆ ಇಲ್ಲದಿರಬೇಕು,
- No-Dues Certificate ಪಡೆಯಬೇಕಾಗುತ್ತದೆ.
One Time Opportunity (OTO) ಏನು ಕೊಡುತ್ತದೆ?
ಅಂತಿಮ ಅಧಿಸೂಚನೆಯ ದಿನಾಂಕದಿಂದ ಮೂರು ತಿಂಗಳ ಅವಧಿ OTO ವಿಂಡೋ ಇರುತ್ತದೆ.
ಅರ್ಹ ಲೆಗಸಿ ಹೋರ್ಡಿಂಗ್ಗಳಿಗೆ:
- ಅರ್ಜಿ ಸಲ್ಲಿಸಲು ಅವಕಾಶ,
- ಆಯುಕ್ತರಿಂದ ಪರಿಶೀಲನೆ ಮತ್ತು ಅನುಮೋದನೆ,
- ಅನುಮತಿ ನೀಡಿದ ದಿನಾಂಕದಿಂದ 5 ವರ್ಷಗಳವರೆಗೆ ವಾಣಿಜ್ಯ ಜಾಹೀರಾತು ಪ್ರದರ್ಶನ,
- 5 ವರ್ಷಗಳ ನಂತರ ಕಡ್ಡಾಯವಾಗಿ ನಿಲ್ಲಿಕೆ,
- ನಿಯಮಗಳಲ್ಲಿ ನಿಗದಿಪಡಿಸಿದ ಗಾತ್ರ, ಎತ್ತರ, ನೆಲದಿಂದ ತೆರವು, ಇತರೆ ತಾಂತ್ರಿಕ ಮಾನದಂಡ ಪಾಲನೆ.
ಬೆಂಗಳೂರು ನಗರದಲ್ಲಿ ಸುಮಾರು 1,000 ಲೆಗಸಿ ಹೋರ್ಡಿಂಗ್ಗಳು ಈ OTO ಪ್ರಕ್ರಿಯೆಗೆ ಒಳಪಡುವ ಸಾಧ್ಯತೆ ಇದೆ.

ಕರೀಗೌಡ ನೇಮಕ ಏಕೆ ಚರ್ಚೆ?
ಜಾಹೀರಾತು ವಿಭಾಗದ ವಿಶೇಷ ಆಯುಕ್ತರ ಹುದ್ದೆ ಇದ್ದರೂ, BWSML ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡರಿಗೆ ಈ ಜವಾಬ್ದಾರಿ ನೀಡಲಾಗಿದೆ.
ಮೂಲಗಳ ಪ್ರಕಾರ, OTO ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕಿರುವುದರಿಂದ ಕೇಂದ್ರೀಕೃತ ಮೇಲ್ವಿಚಾರಣೆ ಅಗತ್ಯವೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಆಡಳಿತ ವಲಯದಲ್ಲಿ ಪ್ರಶ್ನೆಗಳು ಮೂಡಿವೆ:
- ಜಾಹೀರಾತು ನಿಯಂತ್ರಣ ವಲಯದ ಹೊರಗಿನ ಅಧಿಕಾರಿಗೆ ಈ ಜವಾಬ್ದಾರಿ ಏಕೆ?
- ಇದು ಕೇವಲ ನಿಯಮಿತಗೊಳಿಸುವ ಪ್ರಕ್ರಿಯೆಯೇ, ಅಥವಾ ಜಾಹೀರಾತು ವ್ಯವಸ್ಥೆಯ ಪುನರ್ರಚನೆ?
- ಆದಾಯ ಸಂಗ್ರಹಣೆಯ ಮೇಲಿನ ಒತ್ತಡವೇ?
ಹೋರ್ಡಿಂಗ್ ಮಾಲೀಕರ ಜೊತೆ ಮಾತುಕತೆ
ಮೂಲಗಳ ಪ್ರಕಾರ, ಲೆಗಸಿ ಹೋರ್ಡಿಂಗ್ ಮಾಲೀಕರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. OTO ವಿಂಡೋ ಮುಕ್ತಾಯಗೊಳ್ಳುವೊಳಗೆ ಪರಸ್ಪರ ಒಪ್ಪಂದದ ಮೂಲಕ ನಿಯಮಿತಗೊಳಿಸುವ ಪ್ರಯತ್ನ ಮುಂದುವರಿಯಲಿದೆ.
ಇದರಿಂದ ಸರ್ಕಾರದ ಉದ್ದೇಶ:
- ಬಾಕಿ ವಿಚಾರಗಳ ಕಾನೂನು ಸಮಾಧಾನ
- ತೆರಿಗೆ/ಫೀ ಸಂಗ್ರಹಣೆ
- ತಾಂತ್ರಿಕ ಮಾನದಂಡ ಪಾಲನೆ
- ಜಾಹೀರಾತು ವ್ಯವಸ್ಥೆಯ ಏಕೀಕರಣ
ಎಂಬುದಾಗಿ ಅಂದಾಜಿಸಲಾಗಿದೆ.
ವೇಗದ ಕ್ರಮ – ದೊಡ್ಡ ಪ್ರಶ್ನೆಗಳು
- ಜನವರಿ 13 – ನಿಯಮ ಅಧಿಸೂಚನೆ
- ಜನವರಿ 27 – ಡಿಸಿಎಂ ಟಿಪ್ಪಣಿ
- ಫೆಬ್ರವರಿ 4 – ನೋಡಲ್ ಅಧಿಕಾರಿ ನೇಮಕ
ಈ ಕ್ರಮದ ವೇಗ ಗಮನಾರ್ಹವಾಗಿದೆ.
ಮೂರು ತಿಂಗಳ OTO ಗಡುವು ಆರಂಭವಾಗಿದೆ. ಬೆಂಗಳೂರಿನ ಜಾಹೀರಾತು ಆರ್ಥಿಕ ವ್ಯವಸ್ಥೆ, ನಗರ ದೃಶ್ಯ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಇದು ಆರಂಭವಾಗಬಹುದೇ?
ಪ್ರಶ್ನೆಗಳು ಹಲವಿವೆ. ಉತ್ತರಗಳು ಮುಂದೆ ಹೊರಬರುವುವು.
