ಬೆಂಗಳೂರು, ಫೆ. 18: “ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಕೆಪಿಸಿಸಿ ಕಚೇರಿ ಬಳಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಕಸದ ವಿಲೇವಾರಿ ವಿಚಾರ ಹಾಗೂ ಎಸ್ಮಾ (Essential Services Maintenance Act) ಅಡಿ ಪ್ರಕರಣ ದಾಖಲಿಸುವ ಚರ್ಚೆ ಕುರಿತು ಪ್ರತಿಕ್ರಿಯಿಸಿದರು.
ಎಸ್ಮಾ ಅಡಿಯಲ್ಲಿ ಪ್ರಕರಣ ದಾಖಲಿಸಿದರೂ ಎದುರಿಸಲು ಸಿದ್ಧ ಎಂದು ಶಾಸಕರಾದ ಧೀರಜ್ ಮುನಿರಾಜು ಹೇಳಿರುವ ಕುರಿತು ಕೇಳಿದಾಗ, “ಸರಿ, ತೊಂದರೆ ಇಲ್ಲ. ಏನು ಮಾಡಬೇಕೋ ಮಾಡುತ್ತೇವೆ” ಎಂದು ಉತ್ತರಿಸಿದರು. ಸರ್ಕಾರ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಿದೆ ಎಂಬ ಸಂದೇಶವನ್ನು ಅವರು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿಗದಿತ ಸ್ಥಳದಲ್ಲೇ ಅವಕಾಶ ನೀಡುವಂತೆ ಡಿಪಿಐಆರ್ ಆದೇಶ ಹೊರಡಿಸಿರುವ ವಿಚಾರವಾಗಿ ಕೇಳಿದಾಗ, “ಡಿಪಿಐಆರ್ ನನ್ನ ವ್ಯಾಪ್ತಿಯಲ್ಲಿ ಇಲ್ಲ. ಈ ಆದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲಿಸಿ ತಿಳಿಸುತ್ತೇನೆ” ಎಂದು ತಿಳಿಸಿದರು.
ರಾಜ್ಯದ ಆಡಳಿತಾತ್ಮಕ ಹಾಗೂ ನಾಗರಿಕ ಸೇವೆಗಳ ವಿಚಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಾಗುತ್ತದೆ ಎಂಬ ನಿಲುವನ್ನು ಡಿಸಿಎಂ ಸ್ಪಷ್ಟಪಡಿಸಿದರು.
