ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿನಿಧಿ ಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರದ ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದಲ್ಲಿ, ಸರ್ಕಾರಿ ಜಮೀನು ಪರಿಶೀಲನೆಗೆ ತೆರಳಿದ್ದ ಮಹಿಳಾ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಅವರು, ಸರ್ಕಾರ ಸ್ವಾಧೀನಕ್ಕೆ ಪಡೆಯಲು ಗುರುತಿಸಿರುವ ಜಮೀನಿನ ಪರಿಶೀಲನೆಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ, ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಅವರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಜಮೀನಿನಲ್ಲಿ ‘ನಿಮ್ಹಾನ್ಸ್’ ಮಾದರಿಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 20 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಇದರಲ್ಲಿ
- ಸರ್ವೇ ನಂ.8ರಲ್ಲಿ 5 ಎಕರೆ 05 ಗುಂಟೆ,
- ಸರ್ವೇ ನಂ.60ರಲ್ಲಿ 6 ಎಕರೆ 10 ಗುಂಟೆ,
- ಸರ್ವೇ ನಂ.68ರಲ್ಲಿ 8 ಎಕರೆ 25 ಗುಂಟೆ ಜಾಗ ಸೇರಿದೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಆರೋಗ್ಯ ಯೋಜನೆ ಆಗಿದ್ದು, ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಜಮೀನು ಗುರುತಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಆದೇಶಿಸಲಾಗಿದೆ.
ಪರಿಶೀಲನೆ ವೇಳೆ, ಸದರಿ ಜಮೀನಿನಲ್ಲಿ ಅಕ್ರಮವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ, “ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ?” ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಗ್ರಾಮ ಸಹಾಯಕ ನವೀನ್ ಕುಮಾರ್ ಈ ದೌರ್ಜನ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದಾಗ, ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವೀಡಿಯೊವನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಸಂಬಂಧ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿ ಜಿ. ಭವ್ಯಾ ಅವರು ದೂರು ದಾಖಲಿಸಿದ್ದು,
“ಸರ್ಕಾರಿ ಕರ್ತವ್ಯವನ್ನು ನಿರ್ಭಯವಾಗಿ ನಿರ್ವಹಿಸಬೇಕಾದ ನನ್ನಂತಹ ಮಹಿಳಾ ಸಿಬ್ಬಂದಿಗೆ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನನಗೆ ರಕ್ಷಣೆ ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಬೆದರಿಕೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸಾಕ್ಷ್ಯ ನಾಶ ಸೇರಿದಂತೆ ಸಂಬಂಧಿತ ಕಲಂಗಳಡಿ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ, ಮುಖ್ಯಮಂತ್ರಿಯ ಕ್ಷೇತ್ರದಲ್ಲಿಯೇ ಸರ್ಕಾರಿ ಅಧಿಕಾರಿಗಳ ಸುರಕ್ಷತೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ, ವಿಶೇಷವಾಗಿ ಮಹಿಳಾ ಅಧಿಕಾರಿಗಳು ಜಮೀನು ಸ್ವಾಧೀನ ಮತ್ತು ಸ್ಥಳ ಪರಿಶೀಲನೆ ವೇಳೆ ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುತ್ತಿದೆ.
