ಬೆಂಗಳೂರು: ಆನೇಕಲ್ ತಾಲೂಕಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿಬಿದ್ದ ದುರಂತದಲ್ಲಿ ಗಾಯಗೊಂಡಿದ್ದ ಯುವತಿಯೊಬ್ಬಳು ಭಾನುವಾರ ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.
ಮೃತಳನ್ನು ಜ್ಯೋತಿ (16) ಎಂದು ಗುರುತಿಸಲಾಗಿದೆ. ದುರ್ಘಟನೆ ಸಂಭವಿಸಿದ ದಿನ ತೇರಿನ ಕೆಳಗೆ ಸಿಲುಕಿ 28ರ ಯುವಕ ಲೋಹಿತ್ ಅವರು ಸಾವನ್ನಪ್ಪಿದ್ದರು.
ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯುವಕ ರಾಕೇಶ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮದ್ದೂರಮ್ಮ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಎಳೆದು ತರುವ ಹೆಸರಾಂತ ಜಾತ್ರೆ ಇದು. ಪ್ರತಿಷ್ಟೆಗೆ ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಿದ್ದರು. ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ. ಘಟನೆ ವೇಳೆ ತೇರಿನಲ್ಲಿ ಇದ್ದ ಹಲವರಿಗೂ ಗಾಯಗಳಾಗಿವೆ. ಕಳೆದ ವರ್ಷ ಹೀಲಲಿಗೆ ತೇರು ಬಿದ್ದಿತ್ತು. ಗಾಳಿ ಮಳೆ ಹೆಚ್ಚಾಗಿ ಸುರಿದ ಹಿನ್ನೆಲೆ ಮತ್ತೆ ಅವಘಡ ಸಂಭವಿಸಿದೆ.