ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ) : ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಬಹಳಷ್ಟು ವರ್ಷಗಳ ಹಿಂದೆಯೇ ಗುರುತಿಸಿದೆ. ಸದರಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ವಿನಾಯಿತಿ ನೀಡುವ ಬಗ್ಗೆ ಸಚಿವ ಸಂಪುಟದ ಮುಂದೆ ಮಂಡಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಅಬ್ಬಯ್ಯ ಪ್ರಸಾದ್ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸರ್ಕಾರದ ವಿವಿಧ ಇಲಾಖೆ, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳು, ಸಹಕಾರಿ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001 ಹಾಗೂ 2001ರ ನಂತರದಲ್ಲಿ ಪರಿಶಿಷ್ಟ ಜಾತಿಯ 16,413 ಮತ್ತು ಪರಿಶಿಷ್ಟ ಪಂಗಡದ 4,963 ಸೇರಿದಂತೆ ಒಟ್ಟು 21,376 ಹುದ್ದೆಗಳನ್ನು ಗುರುತಿಸಲಾಗಿದೆ. ಗುರುತಿಸಿರುವ ಹುದ್ದೆಗಳ ಪೈಕಿ ಇದೂವರೆವಿಗೂ ಪರಿಶಿಷ್ಟ ಜಾತಿ-15,286 ಮತ್ತು ಪರಿಶಿಷ್ಟ ಪಂಗಡ 4,379 ಸೇರಿದಂತೆ ಒಟ್ಟು 19,665 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕೆಲವು ಇಲಾಖೆ/ಸಂಸ್ಥೆಗಳು ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಮುಚ್ಚಿರುವ ಕಾರಣ ಒಟ್ಟು 795 ಹುದ್ದೆಗಳನ್ನು ಭರ್ತಿ ಮಾಡಲು ವಿನಾಯಿತಿ ಕೋರಿರುತ್ತಾರೆ. ಉಳಿದ 916 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿ ಇರುತ್ತವೆ. 916 ಹುದ್ದೆಗಳ ಪೈಕಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 530, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ ಶಿಕ್ಷಣ) ಯಲ್ಲಿ 185 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 112 ಹುದ್ದೆಗಳು ಸೇರಿ ಒಟ್ಟು 827 ಹುದ್ದೆಗಳಿರುತ್ತವೆ. ಉಳಿದ ಇಲಾಖೆಗಳಲ್ಲಿ 89 ಹುದ್ದೆಗಳಿರುತ್ತವೆ ಎಂದು ಸದನದಲ್ಲಿ ತಿಳಿಸಿದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ದಿನಾಂಕ: 28-10-2024ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ತೀರ್ಮಾನದವರೆಗೂ ಹೊರಡಿಸಬಾರದೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸುತ್ತೋಲೆ ಸಂಖ್ಯೆ : ಸಿಆಸುಇ 388 ಸೇನೆನಿ 2024, ದಿನಾಂಕ: 25-11-2024ರಂದು ಹೊರಡಿಸಲಾಗಿದೆ.
ಅಬ್ಬಯ್ಯ ಪ್ರಸಾದ್ ರವರು ಸದನದಲ್ಲಿ ಇಲಾಖೆಗಳಲ್ಲಿ ರೋಸ್ಟರ್ ವಹಿಗಳನ್ನು ನಿರ್ವಹಿಸುತ್ತಿಲ್ಲ, ಈ ಕುರಿತು ಇಲಾಖೆಗಳಿಗೆ ನಿರ್ದೇಶನ ಹೋಗಬೇಕು, ರೋಸ್ಟರ್ ವಹಿ ನಿರ್ವಹಿಸದ ಇಲಾಖೆಗಳ ವಿರುದ್ದ ಕ್ರಮ ಅಗತ್ಯವೆಂದು ತಿಳಿಸಿದರು.
ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲು ಸೂಚನೆ ನೀಡಿದ್ದಾರೆ. ಅಲ್ಲದೇ 5 ತಂಡಗಳಲ್ಲಿ ತಂಡಗಳನ್ನು ರಚಿಸಿ ಇಲಾಖೆಗಳಿಂದ ಮಾಹಿತಿ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.