ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ-3 (ಬಿಯುಡಿ-3) ವ್ಯಾಪ್ತಿಯಲ್ಲಿ ಜನವರಿ 2026 ತಿಂಗಳಿನಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಗಳಲ್ಲಿ ಡಿಫೆನ್ಸ್ ಸಿಬ್ಬಂದಿಗೆ ಮಾತ್ರ ಮೀಸಲಾದ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣಗಳಲ್ಲಿ ಒಟ್ಟು ₹26 ಲಕ್ಷ ಮೌಲ್ಯದ ಮದ್ಯ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
ಅಬಕಾರಿ ಆಯುಕ್ತರು ಹಾಗೂ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಬೆಂಗಳೂರು ವಿಭಾಗ (ಉತ್ತರ) ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ-3ರ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಜನವರಿ 1: ಜ್ಞಾನಭಾರತಿ ವಲಯದಲ್ಲಿ ಕಾರ್ಯಾಚರಣೆ
ಜನವರಿ 1, 2026ರಂದು ವಲಯ-18, ಜ್ಞಾನಭಾರತಿ ವಲಯ ವ್ಯಾಪ್ತಿಯ ಉಲ್ಲಾಳ ರಸ್ತೆ, ಜ್ಞಾನಗಂಗಾನಗರದ ಬಳಿ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ, ಅಬಕಾರಿ ನಿರೀಕ್ಷಕರು ರಂಗಯ್ಯ ಹಾಗೂ ಉಪ ನಿರೀಕ್ಷಕ ಜಸ್ಮಂತ್ ಪಿ.ವಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ 40 ಬಾಟಲುಗಳು (30 ಲೀಟರ್) ಡಿಫೆನ್ಸ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಜಪ್ತಿಗೊಂಡ ಮದ್ಯ ಹಾಗೂ ವಾಹನಗಳ ಒಟ್ಟು ಮೌಲ್ಯ ₹9 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣದ ಆರೋಪಿಯಾಗಿರುವ ಎಸ್. ಕಿರಣ್ (33), ಜ್ಞಾನಜ್ಯೋತಿನಗರ ನಿವಾಸಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಜನವರಿ 24: ಕೆಂಗೇರಿ ವ್ಯಾಪ್ತಿಯಲ್ಲಿ ದಾಳಿ
ಜನವರಿ 24ರಂದು ವಲಯ-17, ಕೆಂಗೇರಿ ವ್ಯಾಪ್ತಿಯ ಮಾದವಾರ ಗ್ರಾಮ, ದಾಸನಪುರ ಹೋಬಳಿ, ಎನ್ಎಚ್-48 (ಬೆಂಗಳೂರು–ತುಮಕೂರು ರಸ್ತೆ) ಬಳಿ ಮತ್ತೊಂದು ಕಾರ್ಯಾಚರಣೆ ನಡೆಸಲಾಗಿದೆ.
ಇಲ್ಲಿ 49 ಬಾಟಲುಗಳು (36.750 ಲೀಟರ್) ಡಿಫೆನ್ಸ್ ಮದ್ಯ ಹಾಗೂ ಒಂದು ವಾಹನವನ್ನು ಜಪ್ತಿ ಮಾಡಲಾಗಿದ್ದು, ಒಟ್ಟು ಮೌಲ್ಯ ₹17 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಯಾಗಿರುವ ಜಿ. ಗೋವಿಂದರಾಜ್ (27), ಬಳ್ಳಾರಿ ನಿವಾಸಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಜನವರಿ 2026ರ ಒಟ್ಟು ಜಪ್ತಿ ವಿವರ
ಜನವರಿ ತಿಂಗಳಲ್ಲಿ ಒಟ್ಟು 89 ಬಾಟಲುಗಳು (66.750 ಲೀಟರ್) ಡಿಫೆನ್ಸ್ ಸಿಬ್ಬಂದಿಗೆ ಮೀಸಲಾದ ಮದ್ಯ ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಮೌಲ್ಯ ₹26 ಲಕ್ಷ. ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
