ಬೆಂಗಳೂರು:
ಮುಂಗಾರು ಅವಧಿಯಂತೆ ಹಿಂಗಾರು ಅವಧಿಯಲ್ಲಿಯೂ ನಿರೀಕ್ಷಿತ ಪ್ರಮಾಣ ಮಳೆಯಾಗದೇ ಶೇ.65 ರಷ್ಟು ಕೊರತೆ ಉಂಟಾಗಿದೆ. ಇದು ರೈತಾಪಿ ವರ್ಗದವರು ಹಾಗೂ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಶೇ.91 ರಷ್ಟು ಹಿಂಗಾರು ಮಳೆ ಕೊರತೆಯೂ ಕಳೆದ 53 ವರ್ಷದ ಮಹಾ ಕೊರತೆಯಾಗಿದೆ.
ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 85.2 ಸೆಂ.ಮೀ ಮಳೆಯಾಗಬೇಕು. ಆದರೆ, ಈ ಬಾರಿಗೆ ಕೇವಲ 63.5 ಸೆಂ.ಮೀ ಮಳೆಯಾಗಿದ್ದು, ಶೇ.25 ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ಎಂದು ಘೋಷಿಸಲಾಗಿದೆ.
ಇನ್ನು ಹಿಂಗಾರು ಮಳೆಯಾದರೂ ಕೈ ಹಿಡಿಯಬಹುದೆಂಬ ರೈತರಲ್ಲಿನ ಆಶಾ ಭಾವನೆ ಹುಸಿಯಾಗುವ ಲಕ್ಷಣ ಕಾಣುತ್ತಿದೆ. ಹಿಂಗಾರು ಆರಂಭವಾಗಿ 28 ದಿನ ಕಳೆದಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 12.1 ಸೆಂ.ಮೀ ನಷ್ಟು ಮಳೆಯಾಗುವ ಬದಲು ಕೇವಲ 4.2 ಸೆಂ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಹೀಗಾಗಿ ಶೇ.65 ರಷ್ಟು ಮಳೆ ಕೊರತೆ ಎದುರಾಗಿದೆ.