ಬೆಂಗಳೂರು ಗ್ರಾಮಾಂತರ: ಮಾಹಿತಿ ಹಕ್ಕು (RTI) ಅರ್ಜಿಗಳ ವಿಳಂಬ ವಿಲೇವಾರಿ ಸಮಸ್ಯೆಗೆ ಮುಖ್ಯ ಕಾರಣ ಅಧಿಕಾರಿಗಳ ತಿಳುವಳಿಕೆಯ ಕೊರತೆ ಎಂಬುದಾಗಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ 2005ರ ತರಬೇತಿ ಕಾರ್ಯಾಗಾರದಲ್ಲಿ ಈ ಮಹತ್ವದ ಮಾತುಗಳು ವ್ಯಕ್ತವಾದವು.
ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಆರ್‌ಟಿಐ ಕಾಯ್ದೆಯ ಪ್ರಮುಖ ಉದ್ದೇಶವೆಂದರೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ದಾಖಲೆಗಳನ್ನು ಜನರ ಮುಂದೆ ತೆರೆದಿಡುವುದು. ಇದು ಸರಳವಾದ ಮತ್ತು ಪ್ರಭಾವಿ ಜನಪರ ಕಾನೂನು” ಎಂದು ಹೇಳಿದರು.
ಅವರು ಹೆಚ್ಚಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಹಣಕಾಸು, ನರೇಗಾ, ಕಂದಾಯ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ RTI ಅರ್ಜಿಗಳು ಬರುತ್ತದೆ ಎಂದು ವಿವರಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದರೆ ತ್ವರಿತ ವಿಲೇವಾರಿ ಸಾಧ್ಯ ಎಂದರು.

ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆ ತಡೆಯಲು ಸುಪ್ರೀಂ ಕೋರ್ಟ್ ಆದೇಶದಂತೆ ಸಿಸಿಟಿವಿ ಅಳವಡಿಕೆ ಮತ್ತು ಒಂದು ವರ್ಷ ನಿಗದಿತ ಸಂಗ್ರಹಣೆ ಕಡ್ಡಾಯವಾಗಿದೆ ಎಂದು ಅವರು ಸೂಚಿಸಿದರು.
ಮಾಹಿತಿ ನೀಡದಿದ್ದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳಿಗೆ ದಂಡ ಮತ್ತು ಕ್ರಮ ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದರು. ಸಮಯಕ್ಕೆ ಸರಿಯಾಗಿ ಅರ್ಜಿ ವಿಲೇವಾರಿ ಕೂಡ ಅವರ ಕರ್ತವ್ಯವಾಗಿದೆ ಎಂದು ಹೇಳಿದರು.
ಮಾಹಿತಿ ಹಕ್ಕು – ಜನಸ್ನೇಹಿ ಕಾಯ್ದೆ: ಮಾಹಿತಿ ಆಯುಕ್ತ ಡಾ. ಮಮತಾ ಬಿ.ಆರ್. ಅವರು ಮಾತನಾಡಿ, “RTI ಜನಸ್ನೇಹಿ ಕಾಯ್ದೆಯಾಗಿದ್ದು, ಇದನ್ನು ಭಯಪಡದೇ ಪಾಲಿಸಬೇಕು. 6(1) ಸೆಕ್ಷನ್ ಪ್ರಕಾರ ಅರ್ಜಿ ಬಂದರೆ 30 ದಿನಗಳಲ್ಲಿ ಪ್ರತಿ ಪುಟಕ್ಕೆ ₹2 ಪಾವತಿಸಿಕೊಂಡು ಮಾಹಿತಿ ನೀಡಬೇಕು. ವಿಳಂಬವಾದಲ್ಲಿ ಉಚಿತ ಮಾಹಿತಿ ನೀಡಬೇಕು” ಎಂದು ತಿಳಿಸಿದರು.
ಅವರು ಎಲ್ಲಾ ಕಚೇರಿಗಳಲ್ಲಿ 4(1)(a) ಮತ್ತು 4(1)(b) ಸೆಕ್ಷನ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು, ಮತ್ತು ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿ ನೀಡಲು ಸೂಚನೆ ನೀಡಿದರು.
1,440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬೆಂಗಳೂರು ಗ್ರಾಮಾಂತರದಲ್ಲಿ ಬಾಕಿ: ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ. ಅವರು ಮಾತನಾಡಿ, “ಕರ್ನಾಟಕದಲ್ಲಿ ಸದ್ಯ 45,000 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ ಇದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,440 ಪ್ರಕರಣಗಳು ಬಾಕಿ ಇದ್ದು ರಾಜ್ಯದ 9ನೇ ಸ್ಥಾನದಲ್ಲಿದೆ” ಎಂದು ಮಾಹಿತಿ ನೀಡಿದರು. ಅವರು RTI ಅರಿವು ಮತ್ತು ನಿಷ್ಠೆಯಿಂದ ಮಾತ್ರ ಉತ್ತಮ ನಿರ್ವಹಣೆ ಸಾಧ್ಯ ಎಂದರು.
ಸರ್ವೆ ದಾಖಲೆ ಕೂಡ ಆನ್‌ಲೈನ್‌ನಲ್ಲಿ ಲಭ್ಯವಿದೆ: ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು, “ಭೂಮಿಗೆ ಸಂಬಂಧಿಸಿದ ಮಾಹಿತಿಗೆ ಭೂ ಸುರಕ್ಷಾ ಪೋರ್ಟಲ್, ನ್ಯಾಯಾಲಯದ ಮಾಹಿತಿಗೆ RCCMS ಪೋರ್ಟಲ್ ಬಳಕೆಯಲ್ಲಿದೆ. ಈ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಸಿಗುತ್ತದೆ” ಎಂದರು. ಅವರು RTI ನ ಅನ್ವಯ ಸಾರ್ವಜನಿಕ ಹಿತಾಸಕ್ತಿಯ ಕಾಯ್ದೆ ಎಂದು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ. ಕೆ.ಎನ್. ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಎಎಸ್ಪಿ ನಾಗರಾಜ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, PIOಗಳು ಮತ್ತು ಮೇಲ್ಮನವಿ ಅಧಿಕಾರಿಗಳು ಭಾಗವಹಿಸಿದ್ದರು.