ಬೆಂಗಳೂರು:
15 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಇಬ್ಬರು ಪೌರಕಾರ್ಮಿಕರು ತಮ್ಮ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಮಂಗಳವಾರ ನಡೆದಿದೆ.
ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಪಂಚಾಯತ್ ಕಚೇರಿಯ ಮುಂಭಾಗ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಂಗಯ್ಯ ಮತ್ತು ಸುರೇಶ್ ಎಂಬವವರು ಸಂಬಳ ನೀಡುವಂತೆ ಒತ್ತಾಯಿಸಿ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
15 ತಿಂಗಳಿಂದ ವೇತನ ಮಂಜೂರಾಗಿಲ್ಲ, ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇದರಿಂದ ಎಚ್ಚೆತ್ತ ಪಂಚಾಯತ್ ಆಡಳಿತ ಬಾಕಿ ಸಂಬಳ 3.20 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದೆ. ಬಳಿಕ ಇಬ್ಬರು ಪೌರಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.