Home ಕರ್ನಾಟಕ ‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಘೋಷಿಸಿದ ಶಿಕ್ಷಣ ಇಲಾಖೆ

‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಘೋಷಿಸಿದ ಶಿಕ್ಷಣ ಇಲಾಖೆ

375
0

ಬೆಂಗಳೂರು : ರಾಜ್ಯಾದ್ಯಂತ ಮೇ 29ರಿಂದ ಶಾಲೆಗಳು ಆರಂಭವಾಗುತ್ತಿದ್ದು, ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕುರಿತ ವಾರ್ಷಿಕ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ 2024-25ನೆ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಶಾಲಾ ಶಿಕ್ಷಣ ಇಲಾಖೆಯು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.

2024-25ನೆ ಶೈಕ್ಷಣಿಕ ವರ್ಷವನ್ನು ‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಅವಶ್ಯಕತೆಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆ ಹೊಂದಾಣಿಕೆ ಮಾಡಿಕೊಂಡು ಮಗುವಿನ ಕಲಿಕಾ ಬಲವರ್ಧನೆ ಆಗಬೇಕಾಗುತ್ತದೆ ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ.

ಹಿಂದಿನ ಸರಕಾರವು ಎನ್‍ಇಪಿ ಅನ್ವಯ ರಾಜ್ಯದಲ್ಲಿ ಒಂದನೇ ತರಗತಿಗೆ ಪ್ರವೇಶಾತಿಯನ್ನು ಪಡೆಯಲು ಕಡ್ಡಾಯವಾಗಿ ಮಗುವಿಗೆ ಜೂ.1ಕ್ಕೆ ಆರು ವರ್ಷಗಳು ತುಂಬಿರಬೇಕು ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆದೇಶಕ್ಕೆ ತಿದ್ದುಪಡಿಯನ್ನು ತಂದು, ಆದೇಶವು 2025-26ನೆ ಸಾಲಿನಿಂದ ಜಾರಿಗೆ ಬರಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಇತ್ತೀಚೆಗೆ ಕೇಂದ್ರವು ಶಾಲೆಗೆ ಸೇರಲು 6 ವರ್ಷ ಕಡ್ಡಾಯವಾಗಿರಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಇದರ ನಡುವೆಯೂ ಪ್ರಸಕ್ತ ವರ್ಷದ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಜೂ.1ಕ್ಕೆ ಆರು ವರ್ಷಗಳು ತುಂಬಿರಬೇಕು ಎಂಬ ನಿಯಮವನ್ನು ಸಡಿಲಿಸಿದ್ದು, ತಿದ್ದುಪಡಿಯನ್ನೇ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.

2024-25ನೆ ಶೈಕ್ಷಣಿಕ ವರ್ಷದ ಮೊದಲನೇ ಅವಧಿಯು ಮೇ 29ರಿಂದ ಅ.2ರ ವರೆಗೆ ಇರಲಿದೆ. ಎರಡನೇಯ ಅವಧಿಯು ಅ.21ರಿಂದ 2025ರ ಎ.10ಡಿ ವರೆಗೆ ಇರಲಿದೆ. ಬೇಸಿಗೆ ರಜೆಯು ಎ.11ರಿಂದ ಮೇ 28ರ ವರೆಗೆ ಇರಲಿದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

5, 8 ಮತ್ತು 9ನೆ ತರಗತಿಗಳ ಮೌಲ್ಯಂಕನ ಪರೀಕ್ಷೆ(ಬೋರ್ಡ್ ಎಕ್ಸಾಂ) ನಡೆಸುವ ಕುರಿತಾಗಿ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಾಗಿದ್ದರೂ, ಪ್ರಸಕ್ತ ವರ್ಷದ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಮೌಲ್ಯಂಕನ ಪರೀಕ್ಷೆ ನಡೆಸುವ ಹಾಗೂ ಫಲಿತಾಂಶವನ್ನು ಪ್ರಕಟಿಸುವ ಕುರಿತಾಗಿ ಉಲ್ಲೇಖಿಸಲಾಗಿದೆ. 5, 8 ಮತ್ತು 9ನೆ ತರಗತಿಗಳ ಮೌಲ್ಯಂಕನ ಪರೀಕ್ಷೆ ಸೇರಿ ಉಳಿದ ತರಗತಿಗಳ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಶೈಕ್ಷಣಿಕ ಮಾರ್ಗದರ್ಶಿಯು ಇಲಾಖೆಯ ಬೋಧಕ ಮತ್ತು ಬೋಧಕೇತರ ವೃಂದಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ಮೇಲುಸ್ತುವಾರಿ ಮಾಡುವ ನೋಡಲ್ ಅಧಿಕಾರಿಗಳಿಗೆ ಶಾಲೆಗಳಲ್ಲಿ ಮತ್ತು ಕಛೇರಿಗಳಲ್ಲಿ ಪ್ರಗತಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಲು ಬಹಳ ಉಪಯುಕ್ತವಾದ ಪುಸ್ತಕವಾಗಿರುವುದರಿಂದ ಸಾರ್ವತ್ರಿಕವಾಗಿ ಲಭ್ಯಪಡಿಸುವ ಸಲುವಾಗಿ ಇಲಾಖಾ ಅಂತರ್ಜಾಲ ತಾಣ https://schooleducation.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ರಾಜ್ಯಾದ ಎಲ್ಲ ಶಾಲೆಗಳ ಮುಖ್ಯಸ್ಥರು ಮಾರ್ಗಸೂಚಿಯನ್ನು ಡೌನ್ ಲೋಡ್ ಮಾಡಿಕೊಂಡು, ನಿಯಮಾನುಸಾರ ಮುದ್ರಿಸಿಕೊಂಡು ಅನುಪಾಲನೆ ಮಾಡಬೇಕು. ಮುದ್ರಣ ಕಾರ್ಯಕ್ಕಾಗಿ ಆಯಾ ಶಾಲೆಯಲ್ಲಿ ಲಭ್ಯವಿರುವ ಅನುದಾನದಿಂದ 350 ರೂ.ಗಳ ಗರಿಷ್ಠ ಮಿತಿಯೊಳಗೆ ವೆಚ್ಚವನ್ನು ನಿಯಮಾನುಸಾರ ಭರಿಸಿರುವ ಕುರಿತು ತಪಾಸಣಾ ಸಮಯದಲ್ಲಿ ಹಾಜರು ಪಡಿಸಲು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here