ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸರ್ಕಾರ ₹7,093 ಕೋಟಿ ಭಿಕ್ಷುಕ ಸೆಸ್ ಸಂಗ್ರಹಿಸಿದ್ದರೂ, ಮಕ್ಕಳ ಭಿಕ್ಷಾಟನೆ ಇನ್ನೂ ಬೀದಿಗಳಲ್ಲಿ ಮುಂದುವರಿಯುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಪೀಠವು “ಸರ್ಕಾರದ ಕಾರ್ಯವೈಖರಿ ಸೂಕ್ತವಾಗಿಲ್ಲ, ಈ ಸ್ಥಿತಿ ರಾಜ್ಯದ ಆಡಳಿತದ ದುರ್ಬಲತೆಯನ್ನು ತೋರಿಸುತ್ತದೆ” ಎಂದು ಕಮೆಂಟ್ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಲೆಟ್ಜ್ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿತು. ಈ ಅರ್ಜಿಯಲ್ಲಿ ಭಿಕ್ಷಾಟನೆಗೆ ಒಳಪಟ್ಟ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.
ವಾದಗಳನ್ನು ಆಲಿಸಿದ ನಂತರ, ನ್ಯಾಯಪೀಠವು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ಸೆಸ್ ಹಣವನ್ನು ಸರ್ಕಾರ ಹೇಗೆ ವಸೂಲಿ ಮಾಡುತ್ತಿದೆ ಮತ್ತು ಹೇಗೆ ಖರ್ಚು ಮಾಡುತ್ತಿದೆ ಎಂಬ ಸಂಪೂರ್ಣ ವಿವರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು ಮತ್ತು ವಿಚಾರಣೆಯನ್ನು 8 ವಾರಗಳ ಕಾಲ ಮುಂದೂಡಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪುತ್ತಿಗೆ ಆರ್. ರಮೇಶ್ ವಾದ ಮಂಡಿಸಿ, 2021–22ರಿಂದ 2024–25ರವರೆಗೆ ಸರ್ಕಾರ ಒಟ್ಟು ₹7,093 ಕೋಟಿ ಸೆಸ್ ಸಂಗ್ರಹಿಸಿದ್ದು, ಅದರಲ್ಲಿ ₹3,453 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ₹3,639 ಕೋಟಿ ರೂ. ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ಖಜಾನೆಗೆ ವರ್ಗಾಯಿಸಬೇಕಿದೆ ಎಂದರು. ಸಾವಿರಾರು ಕೋಟಿ ರೂ. ಖರ್ಚಾದರೂ ಮಕ್ಕಳ ಭಿಕ್ಷಾಟನೆ ಇನ್ನೂ ನಿಲ್ಲದಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸರ್ಕಾರದ ಪರ ವಕೀಲರು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ಸೆಸ್ ಹಣವನ್ನು ಸರ್ಕಾರಕ್ಕೆ ವರ್ಗಾಯಿಸುತ್ತಿಲ್ಲ, ಅದರ ಕುರಿತು ಜ್ಞಾಪನಾ ಪತ್ರಗಳನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು.
ಅಂತಿಮವಾಗಿ ನ್ಯಾಯಪೀಠವು ಸರ್ಕಾರಕ್ಕೆ ಎಷ್ಟು ಸೆಸ್ ಸಂಗ್ರಹವಾಗಿದೆ, ಎಷ್ಟು ಖರ್ಚಾಗಿದೆ ಮತ್ತು ಎಷ್ಟು ಬಾಕಿಯಿದೆ ಎಂಬ ಸಂಪೂರ್ಣ ಲೆಕ್ಕ ನೀಡುವಂತೆ ಸೂಚಿಸಿತು. ಜೊತೆಗೆ, ಭಿಕ್ಷುಕ ಸೆಸ್ ಸಂಗ್ರಹ ಮತ್ತು ಉಪಯೋಗದ ಕುರಿತು ಸಂಪೂರ್ಣ ಅಂಕಿಅಂಶ ಸಂಗ್ರಹಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಗೆ ಸೂಚನೆ ನೀಡಿತು.
ನ್ಯಾಯಪೀಠವು ಸರ್ಕಾರ ಮತ್ತು ಕೆಎಸ್ಎಲ್ಎಸ್ಎ ಎರಡೂ 8 ವಾರಗಳೊಳಗೆ ಸಂಯುಕ್ತ ವರದಿ ಸಲ್ಲಿಸಬೇಕು ಎಂದು ಆದೇಶಿಸಿತು.
ಹೈಕೋರ್ಟ್ನ ಈ ವೀಕ್ಷಣೆಗಳು ರಾಜ್ಯ ಸರ್ಕಾರದ ಸಮಾಜಮುಖಿ ಯೋಜನೆಗಳ ವೈಫಲ್ಯ ಮತ್ತು ಮಕ್ಕಳ ಭಿಕ್ಷಾಟನೆ ನಿರ್ಮೂಲನೆಗೆ ಅಗತ್ಯ ಕ್ರಮಗಳ ಕೊರತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ. ನ್ಯಾಯಪೀಠವು ಹಣದ ಪಾರದರ್ಶಕತೆ, ಲೆಕ್ಕಪತ್ರ ಹಾಗೂ ಪುನರ್ವಸತಿ ಕ್ರಮಗಳು ಸ್ಪಷ್ಟವಾಗಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.
