ಬೆಂಗಳೂರು:
ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಐವರು ಬಂಧಿತ ವಿದೇಶಿಯರ ಪೈಕಿ ಓರ್ವ ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಮಧ್ಯಾಹ್ನ ಜೆ.ಸಿ.ನಗರ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಫ್ರಿಕಾದ ಪ್ರಜೆಗಳು ಯಾರೆಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಯೂರಿನ್ ಟೆಸ್ಟ್ ವೇಳೆ ಗುಲೋರ್ಡ್ ಎಂಬಾತ ಮಾದಕ ವಸ್ತು ಸೇವಿಸಿರುವುದು ಖಾತರಿಯಾಗಿದೆ ಎಂದರು.
ಪೊಲೀಸ್ ವಶದಲ್ಲಿರುವಾಗಲೇ ಮೃತಪಟ್ಟಿದ್ದಾನೆ ಎನ್ನಲಾದ ಜಾನ್ ಎಂಬಾತನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಶವವನ್ನು ಯಾರಿಗೆ ಹಸ್ತಾಂತರ ಮಾಡುವುದರ ಬಗ್ಗೆ ರಾಯಬಾರಿ ಕಚೇರಿ ಅಧಿಕಾರಿಗಳ ಅಭಿಪ್ರಾಯ ಕೇಳಲಾಗುವುದು ಎಂದರು.
ಇಲ್ಲಿ ಓದಿ: ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು
ಇಲ್ಲಿ ಓದಿ: ಆಫ್ರಿಕನ್ ಪ್ರಜೆ ಸಾವು: ಆಫ್ರಿಕನ್ ಪ್ರಜೆಗಳಿಂದ ಬೆಂಗಳೂರು ಪೊಲೀಸರ ಮೇಲೆ ಹಲ್ಲೆ
ಐವರ ಬಂಧನ
ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಜೆಸಿ ನಗರ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಮಾನ್ ಗ್ವಾಯ್, ಕ್ಲೆಮೆಂಟ್ ಬಕೆನ್ನಾ, ಗುಲಾರ್ಡ್ ಕುಲುಮೆ, ಯೂಸುಫ್ ಮಕಿಟಾ, ಗ್ಯೋ ಕುಂಗು ಬಂಧಿತ ಆರೋಪಿಗಳು.
ಘಟನೆ ನಡೆದ ಬಳಿಕ ಪರಾರಿಯಾಗಿದ್ದವರಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು, ಮೂರು ವಿಶೇಷ ತಂಡ ರಚಿಸಿದ್ದರು. ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಆರ್.ಟಿ. ನಗರ, ರಾಮಮೂರ್ತಿನಗರ ಮತ್ತು ಟಿ. ಸಿ. ಪಾಳ್ಯದಲ್ಲಿ ವಿಶೇಷ ತಂಡಗಳು ಶೋಧ ಕಾರ್ಯ ನಡೆಸಿದ್ದವು.