ಬೆಂಗಳೂರು, ಮಾರ್ಚ್ 22: ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಹೈವೇಯಿಂದ ಸರ್ವೀಸ್ ರಸ್ತೆಗೆ ಯೂಟರ್ನ್ ಪಡೆಯುವ ವೇಳೆ ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು ಜಯಮ್ಮ (60), ಯಶೋದಮ್ಮ (60) ಮತ್ತು ಗಂಗಾ (38) ಎಂದು ಗುರುತಿಸಲಾಗಿದೆ.
ಮೃತರು ಹಾಗೂ ಗಾಯಾಳುಗಳು ತಿಪಟೂರಿನ ಒಂದೇ ಪ್ರದೇಶದವರು. 15 ದಿನಗಳ ಕಾಶಿ ಪ್ರವಾಸಕ್ಕಾಗಿ ಬೆಳಗ್ಗೆ 6 ಗಂಟೆಯ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದ ತಂಡ ರಾತ್ರಿ 10 ಗಂಟೆಗೆ ಟಿಟಿ ವಾಹನದಲ್ಲಿ ಏರ್ಪೋರ್ಟ್ ಕಡೆ ಪ್ರಯಾಣ ಆರಂಭಿಸಿತ್ತು.
ಗೂಗಲ್ ಮ್ಯಾಪ್ ಬಳಸಿ ಚಾಲನೆ ಮಾಡುತ್ತಿದ್ದ ಚಾಲಕ ಮೊದಲ ಸರ್ವೀಸ್ ರಸ್ತೆ ಮಿಸ್ ಮಾಡಿಕೊಂಡಿದ್ದಾನೆ. ನಂತರದ ಟರ್ನಿಂಗ್ನಲ್ಲಿ ಯೂಟರ್ನ್ ಪಡೆಯುವ ವೇಳೆ ಲಾರಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಅಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಗೊಂಡ ಎಂಟು ಮಂದಿಗೆ ದೇವನಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಪಮ್ಮ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಂಚಾರಿ ವಿಭಾಗದ ಎಸಿಪಿ ಪ್ರದೀಪ್ ಮಾಹಿತಿ ನೀಡಿದ್ದು,
“ಚಾಲಕ ಗೂಗಲ್ ಮ್ಯಾಪ್ ನೋಡಿ ಬರುತ್ತಿದ್ದ ವೇಳೆ ತಪ್ಪಾಗಿ ಮುಂದೆ ಬಂದಿದ್ದಾನೆ. ಯೂಟರ್ನ್ ಪಡೆಯುವಾಗ ಸೆಂಟರ್ ಲೈನ್ಗೆ ಬಂದಿದ್ದು, ಪಕ್ಕದಲ್ಲಿದ್ದ ಲಾರಿ ಡಿಕ್ಕಿ ಹೊಡೆದಿದೆ. ಓವರ್ ಸ್ಪೀಡ್ ಕಾರಣವೂ ಇರಬಹುದು,” ಎಂದಿದ್ದಾರೆ.
ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ರಾತ್ರಿ ವೇಳೆ ವೇಗ, ನಾವಿಗೇಶನ್ ತಪ್ಪು ಮತ್ತು ರಸ್ತೆ ಸುರಕ್ಷತೆ ಕೊರತೆ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
