ಬೆಂಗಳೂರು:
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇಳಿ ವಯಸ್ಸಿನಲ್ಲೂ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದು, ನಾಳೆಯಿಂದ ಮುಂದಿನ 11 ದಿನಗಳಲ್ಲಿ 42 ಸ್ಥಳಗಳಲ್ಲಿ ತಮ್ಮ ಪಕ್ಷದ ಪರ ಪ್ರಚಾರ ನಡೆಸುವುದಾಗಿ ಗುರುವಾರ ಹೇಳಿದ್ದಾರೆ.
ತಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಾರಕ್ಕೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುವುದಾಗಿ 89 ವರ್ಷದ ಮಾಜಿ ಪ್ರಧಾನಿ ತಿಳಿಸಿದ್ದಾರೆ.
ನಾಳೆಯಿಂದ ಮೇ 8ರವರೆಗೆ 42 ಕಡೆ ಪ್ರಚಾರ ನಡೆಸುತ್ತೇನೆ. ಇದೊಂದು ತಾತ್ಕಾಲಿಕ ಕಾರ್ಯಕ್ರಮ. ವಾರಕ್ಕೊಮ್ಮೆ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿರುವುದರಿಂದ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಾರಕ್ಕೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ದೇವೇಗೌಡ ಅವರು ಹೇಳಿದ್ದಾರೆ. ದೇವೇಗೌಡ ಅವರು ಮೇ 18ಕ್ಕೆ 90ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಪಕ್ಷವು 211 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಅದರಲ್ಲಿ ಇಬ್ಬರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಇಬ್ಬರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಜೆಡಿಎಸ್‌ನ 207 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮಾಜಿ ಪ್ರಧಾನಿ ತಿಳಿಸಿದ್ದಾರೆ.
ಇದರ ಹೊರತಾಗಿ, ಜೆಡಿ-ಎಸ್ ಮೂರು ಸಿಪಿಐ-ಎಂ ಮತ್ತು ಮೂರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಗಳಿಗೆ ತನ್ನ ಬೆಂಬಲವನ್ನು ನೀಡಿದೆ.