ಬೆಂಗಳೂರು / ದೆಹಲಿ: ಜನವರಿ 15ರ ನಂತರ ಕರ್ನಾಟಕ ಕಾಂಗ್ರೆಸ್ನಲ್ಲಿ ಕೆಲವು ಮಹತ್ವದ ಹಾಗೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳ ದೆಹಲಿ ಭೇಟಿ ಸಾಧ್ಯತೆ ಹೆಚ್ಚಿರುವುದು ಈ ಊಹೆಗಳಿಗೆ ಬಲ ನೀಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆ, ಅವರು ಮರಳಿ ಭಾರತಕ್ಕೆ ಬರುವವರೆಗೂ ಯಾವುದೇ ಪ್ರಮುಖ ನಿರ್ಧಾರಗಳು ಕೈಗೊಳ್ಳಲಾಗುವುದಿಲ್ಲ ಎಂದು ಪಕ್ಷದ ಒಳವಲಯದಲ್ಲಿ ಚರ್ಚೆ ನಡೆಯುತ್ತಿದೆ. ಲಭ್ಯ ಮಾಹಿತಿಯ ಪ್ರಕಾರ, ರಾಹುಲ್ ಗಾಂಧಿ ಜನವರಿ 9ರ ನಂತರ ಭಾರತಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ.
ನಾಯಕತ್ವ ಬದಲಾವಣೆ ಕುರಿತು ನೇರವಾಗಿ ಯಾವುದೇ ಸೂಚನೆಗಳಿಲ್ಲದಿದ್ದರೂ, ಸಂಪುಟ ಪುನರಚನೆಗೆ ಸಂಬಂಧಿಸಿದಂತೆ ಆಂತರಿಕ ತಯಾರಿಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಹುಲ್ ಗಾಂಧಿ ವಿದೇಶ ಪ್ರವಾಸ ಮುಗಿಸಿ ಮರಳಿದ ಬಳಿಕ ಈ ಪ್ರಕ್ರಿಯೆಗೆ ವೇಗ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಧಿಕಾರ ಕಿತ್ತುಕೊಳ್ಳುವುದು ಸುಲಭವಲ್ಲ: ಕೋಡಿಮಠ ಶ್ರೀ ಶಾಕಿಂಗ್ ರಾಜಕೀಯ ಭವಿಷ್ಯ
ಈ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೊಂದಲಗಳ ಕುರಿತು ಮಾತನಾಡುತ್ತಿದ್ದರೂ, ಹೈಕಮಾಂಡ್ ಮಧ್ಯಪ್ರವೇಶದ ಸ್ಪಷ್ಟ ಸೂಚನೆ ನೀಡಿಲ್ಲ. ಪಕ್ಷದ ಹಿರಿಯ ನಾಯಕರಿಂದ ‘ಸ್ಥಿತಿ ಅವಲೋಕನ’ದ ಧೋರಣೆಯೇ ಮುಂದುವರೆದಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ರಾಹುಲ್ ಗಾಂಧಿ ವಾಪಸ್ಸಾದ ನಂತರ ಜನವರಿಯಲ್ಲಿ ಮತ್ತೆ ಸಭೆ ನಡೆಸೋಣ ಎಂಬ ಸಂದೇಶವನ್ನು ವೇಣುಗೋಪಾಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ, ಸಿಡಬ್ಲ್ಯೂಸಿ ಸಭೆಯ ಬಳಿಕವೂ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್ ನಾಯಕರೊಂದಿಗೆ ನೇರ ಮಾತುಕತೆ ನಡೆಸುವ ಅವಕಾಶ ಸಿಕ್ಕಿಲ್ಲ ಎಂಬುದು ರಾಜಕೀಯ ವಲಯದ ಗಮನ ಸೆಳೆದಿದೆ.
ಒಟ್ಟಿನಲ್ಲಿ, ಜನವರಿ ತಿಂಗಳು ಕರ್ನಾಟಕ ಕಾಂಗ್ರೆಸ್ ರಾಜಕೀಯದ ದೃಷ್ಟಿಯಿಂದ ನಿರ್ಣಾಯಕವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
