ಮಂಗಳೂರು / ಬೆಂಗಳೂರು:: ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ 100 ಕಚೇರಿಗಳಿಗೆ ಶಂಕುಸ್ಥಾಪನೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಎಐಸಿಸಿ ದಿನಾಂಕ ನೀಡಿದರೂ ನೀಡದಿದ್ದರೂ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮಾರ್ಚ್ನಲ್ಲೇ ಕೆಲಸ ಆರಂಭಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಇಂದು ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ್ದೇನೆ ಎಂದು ಹೇಳಿದ ಶಿವಕುಮಾರ್, ಮಾರ್ಚ್ 10ಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಟ್ಟಡ ನಿರ್ಮಾಣ ಮತ್ತು ಸಂಘಟನೆ ಬಲವರ್ಧನೆ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸ್ಲಿಂ ಸಮುದಾಯವನ್ನು ಆಹ್ವಾನಿಸಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಜಾತಿ ಅಥವಾ ಧರ್ಮದ ಮೇಲೆ ರಾಜಕೀಯ ಮಾಡುವುದಿಲ್ಲ. ನೀತಿ ಮತ್ತು ತತ್ವಗಳ ಮೇಲೆ ರಾಜಕೀಯ ಮಾಡುತ್ತದೆ. ಎಲ್ಲ ಜಾತಿ–ಧರ್ಮದವರು ನಮ್ಮೊಂದಿಗೆ ಇರಬೇಕು ಎಂಬುದೇ ನಮ್ಮ ಸಿದ್ಧಾಂತ. ರಾಜಕೀಯದಲ್ಲಿ ಧರ್ಮ ಇರಬಹುದು; ಧರ್ಮದಲ್ಲಿ ರಾಜಕೀಯ ಇರಬಾರದು. ಅಸೂಯೆಯಿಂದ ಕೆಲವರು ಇಂತಹ ಆರೋಪಗಳನ್ನು ಮಾಡುತ್ತಾರೆ” ಎಂದು ತಿರುಗೇಟು ನೀಡಿದರು.
ಈ ಘೋಷಣೆಯೊಂದಿಗೆ, ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷದ ಗ್ರಾಸ್ರೂಟ್ ಮಟ್ಟದ ಸಂಘಟನೆ ಬಲಪಡಿಸುವ ಉದ್ದೇಶದ ದೊಡ್ಡ ಹೆಜ್ಜೆಯಾಗಿ 100 ಕಚೇರಿಗಳ ಯೋಜನೆ ಮುಂದುವರಿಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
