ಬೆಂಗಳೂರು:
ಪರಿಷ್ಕೃತಗೊಂಡ ಪಿಂಚಣಿಯ ಬಾಕಿ ಮೊತ್ತ ಬಿಡುಗಡೆಗೆ 50 ಸಾವಿರ ಲಂಚ ಕೇಳಿದ್ದ ಬೆಸ್ಕಾಂ ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿ ಗಿರೀಶ್ ಅವರನ್ನು ಅಮಾನತು ಮಾಡಬೇಕು ಎಂದು ಸ್ಥಳದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸಿ 2007 ರಲ್ಲಿ ನಿವೃತ್ತಿ ಹೊಂದಿದ್ದೇನೆ.15 ವರ್ಷಗಳಿಂದ ಅಲೆದು ಸುಸ್ತಾಗಿದ್ದೇನೆ ಎಂದು ಅವಲತ್ತುಕೊಂಡ ಎಸ್.ಎಂ. ಗೋವಿಂದಪ್ಪ ಅವರಿಗೆ “ಕೆಲವೇ ದಿನಗಳಲ್ಲಿ ನಿಮಗೆ ನಿವೃತ್ತಿ ವೇತನ ದೊರೆಯುತ್ತದೆ” ಎಂದು ಭರವಸೆ ನೀಡಿದರು.
ನಗರದ ಶೇಷಾದ್ರಿಪುರಂನ ಶಿರೂರು ಮೈದಾನದಲ್ಲಿ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಸರಣಿ ಕಾರ್ಯಕ್ರಮದ 5 ನೇ ಆವೃತ್ತಿಯು ಅನೇಕ ಜನಪರ ಸ್ಪಂದನೆಗಳಿಗೆ ಸಾಕ್ಷಿಯಾಯಿತು.
ವೇದಿಕೆಯ ಮುಂಭಾಗ ಜಮಾಯಿಸಿದ್ದ 100 ಕ್ಕೂ ಹೆಚ್ಚು ಮಲ್ಲೇಶ್ವರದ ಬೀದಿಬದಿ ವ್ಯಾಪಾರಿಗಳು “ಶಿವಕುಮಾರ್ ಸಾರ್ ನಮಗೆ ವ್ಯಾಪಾರ ಮಾಡಲು ಸ್ಥಳವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು “ನೀವು ಎಲ್ಲಿದ್ದೀರೋ ಅಲ್ಲಿಗೆ ಬರುತ್ತೇನೆ, ನಿಮ್ಮ ಸಮಸ್ಯೆ ಆಲಿಸುತ್ತೇನೆ” ಎಂದು ವೇದಿಕೆ ಇಳಿದು ಬೀದಿಬದಿ ವ್ಯಾಪಾರಿಗಳು ಇದ್ದಲ್ಲಿಗೆ ಡಿಸಿಎಂ ಅವರು ತೆರಳಿದರು.
“ಪಾಲಿಕೆ ವತಿಯಿಂದ ತಳ್ಳುವ ಗಾಡಿಗೆ 10 ಸಾವಿರ ನೀಡಲಾಗುವುದು. ಸಾರ್ವಜನಿಕರಿಗೆ ಹಾಗೂ ನಿಮಗೆ ಇಬ್ಬರಿಗೂ ತೊಂದರೆ ಆಗದಂತೆ ತೀರ್ಮಾನ ಮಾಡಲಾಗುವುದು” ಎಂದಾಗ ಜೈಕಾರ ಕೂಗಿ ಬೀದಿಬದಿ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.
ನಿಮ್ಮ ಜೊತೆ ನಿಲ್ಲುವೆ, ಪರಿಹಾರ ಕೊಡಿಸುವೆ!
— DK Shivakumar (@DKShivakumar) January 16, 2024
"ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಿದವರ ಪರ ನಿಂತು ಪರಿಹಾರ ಕೊಡಿಸುವ ಕಾಯಕ ನಮ್ಮದು. ಜನಸಾಮಾನ್ಯರ ಪ್ರಗತಿಯೇ ನಮ್ಮ ಮೊದಲ ಆದ್ಯತೆ. pic.twitter.com/H9vccPlW6O
“ಶಿವಕುಮಾರಪ್ಪ ನಿಮ್ಮ ಈ ಕಾರ್ಯಕ್ರಮದಿಂದ ಜನರ ಕಷ್ಟ ದೂರವಾಗಲಿ, ಹೀಗೆ ಕಾರ್ಯಕ್ರಮ ಮಾಡುತ್ತಿರಿ” ಎಂದು ಮಲ್ಲೇಶ್ವರದ ಕಾವೇರಮ್ಮ ಅವರು ಡಿಸಿಎಂ ಅವರಿಗೆ ಹಾರೈಸಿದರು.
ಸಾರ್ ಸರ್ಕಾರಿ ನೌಕರಿ ಕೊಡಿ
ಸಾರ್ ನಾನು ಅಂಗವಿಕಲ, ಸಾಕಷ್ಟು ಕಡೆ ಕೆಲಸಕ್ಕೆ ಅಲೆದಿರುವೆ, ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಒಂದು ಸರ್ಕಾರಿ ಕೆಲಸ ಕೊಡಿಸಿ ಎಂದು ಕಾಟನ್ ಪೇಟೆಯ ಮಹಮದ್ ಯೂನಸ್ ಮನವಿ ನೀಡಿದಾಗ “ಸರ್ಕಾರಿ ಕೆಲಸ ಕೊಡಲು ಆಗುವುದಿಲ್ಲ. ಸರ್ಕಾರಿ ಕೆಲಸ ಬೇಕೆಂದರೆ ಅರ್ಜಿ ಕರೆದಾಗ ಹಾಕಬೇಕು. ಸರ್ಕಾರದಿಂದ ಉದ್ಯೋಗ ಮೇಳ ಮಾಡುತ್ತೇವೆ, ಆಗ ಏನಾದರೂ ಸಹಾಯ ಮಾಡಬಹುದು” ಎಂದು ಡಿಸಿಎಂ ಯುವಕನಿಗೆ ತಿಳಿಸಿದರು.
ಗಾಂಧಿ ಶಾಲೆ ಅಭಿವೃದ್ದಿ ಮಾಡಿ
ಚಾಮರಾಜಪೇಟೆ ಭಕ್ಷಿ ಗಾರ್ಡನ್ ನ ಮಹಾತ್ಮ ಗಾಂಧಿ ಅವರು ಭೇಟಿ ನೀಡಿದ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಮಾಡಿ ಮತ್ತು ಅರ್ಧಕ್ಕೆ ನಿಂತಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಮುಗಿಸಿಕೊಡಿ ಎಂದು ಪ್ರಭಾಕರ್ ಅವರು ಸಲ್ಲಿಸಿದ ಮನವಿ ಸ್ವೀಕರಿಸಿ, ಬಿಬಿಎಂಪಿ ಆಯುಕ್ತ ರಾದ ತುಷಾರ್ ಗಿರಿನಾಥ್ ಅವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದರು.
ಜಕ್ಕರಾಯನಕೆರೆ ಆಟದ ಮೈದಾನದಲ್ಲಿ ಸೀಜ್ ಆದ ವಾಹನಗಳನ್ನು ತಂದು ಪೊಲೀಸರು ರಾಶಿ ಹಾಕಿದ್ದಾರೆ. ಈ ಮೈದಾನದಲ್ಲಿ ಆಟವಾಡಲು ಜಾಗವಿಲ್ಲದಂತಾಗಿದೆ ಎಂದು ಶೇಷಾದ್ರಿಪುರಂ ಮುರಳಿ ಮನವಿ ಸಲ್ಲಿಸಿದರು.
“ಕೂಡಲೇ ಪೊಲೀಸ್ ಇಲಾಖೆಗೆ ಬೇರೆ ಜಾಗ ನೋಡಿಕೊಳ್ಳುವಂತೆ ತಿಳಿಸಲಾಗುವುದು. ಬಿಬಿಎಂಪಿ ಅವರು ಸ್ಥಳ ಪರಿಶೀಲಿಸಿ ಸ್ವಚ್ಚ ಮಾಡಿಕೊಡಲಿದ್ದಾರೆ, ಎಂದು ಡಿಸಿಎಂ ಭರವಸೆ ನೀಡಿದರು ಹಾಗೂ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.
2017 ರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಸಿಕ್ಕಿದರೂ ತಾಂತ್ರಿಕ ಸಮಸ್ಯೆಯಿಂದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಮಲ್ಲೇಶ್ವರಂನ ರಂಜಾನ. ಪಿ ಅವರು ಸಮಸ್ಯೆ ಹೇಳಿಕೊಂಡರು.
“ಇಷ್ಟು ವರ್ಷಗಳಾದರೂ ಕೆಲಸ ಸಿಕ್ಕಿಲ್ಲವೇ? ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ” ಎಂದು ಆ ಮಹಿಳೆಗೆ ಡಿಸಿಎಂ ಅವರು ಆತ್ಮವಿಶ್ವಾಸ ತುಂಬಿದರು.
ಬಿಡಿಎ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಕ್ಕೆ ದುಡ್ಡು ಕಟ್ಟಿದ್ದರೂ ನಮಗೆ ನಿವೇಶನ ನೀಡಿಲ್ಲ ಎಂದು ಅಬ್ಬಿಗೆರೆಯ ಗಾಯತ್ರಿ ಬಾಯಿ ಅವರು ಕಣ್ಣೀರಾದರು.
‘ಅಳಬೇಡಮ್ಮ…’ ಎಂದ ಡಿಸಿಎಂ ಅವರು ಬಿಡಿಎ ಆಯುಕ್ತರಾದ ಜಯರಾಂ ಅವರಿಗೆ “ಇಲ್ಲೇ ಈ ಸಮಸ್ಯೆ ಬಗೆಹರಿಸಿ” ಎಂದು ಸೂಚನೆ ನೀಡಿದರು.
“ಜಮೀರ್ ಅವರನ್ನು ಬಿಡಬೇಡ ಹಿಡ್ಕೊ”:
ಕುಂಬಳಗೋಡಿನ ದೇವಕೆರೆಯಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಆದರೆ ನಮ್ಮ ಹೆಸರಿಗೆ ನೀಡಿಲ್ಲ ಎಂದಾಗ “ಜಮೀರ್ ಅವರೇ ಸಚಿವರು, ಅವರನ್ನ ಬಿಡಬೇಡ ಹಿಡ್ಕೊ” ಎಂದು ಮನವಿ ನೀಡಿದ ಪ್ರಕಾಶ್‌ಗೆ ಹೇಳಿದರು.
ಎಸ್‌ಟಿ ಲೋನ್ ಸಿಗುತ್ತಿಲ್ಲ ದಯವಿಟ್ಟು ಮಾಡಿಕೊಡಿ ಎಂದು ಚಾಮರಾಜಪೇಟೆಯ ಸುನಂದಮ್ಮ, ನನ್ನ ಆಟೋಗೆ ಎಫ್.ಸಿ ಮಾಡಿಸಿಕೊಡಿ ಎಂದು ಮಲ್ಲೇಶ್ವರದ ಜಗದೀಶ್, ವಿಕಲಚೇತನರ ಪಿಂಚಣಿ ಕೊಡಿಸಿ ಎಂದು ಯಶವಂತಪುರದ ಧನಲಕ್ಷ್ಮೀ ಅವರು ಮನವಿ ಸಲ್ಲಿಸಿದರು.