ಮಂಗಳೂರು / ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನೊಳಗಿನ ನಾಯಕತ್ವ ಚರ್ಚೆ ತೀವ್ರಗೊಳ್ಳುತ್ತಿರುವ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಬೇಕೆಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಪುತ್ರ ಹಾಗೂ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು “ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಹೈಕಮಾಂಡ್ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ” ಎಂದು ಹೇಳಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,
“ಅವರೇ ನಮ್ಮ ಹೈಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ಯಾರಾದರೂ ತಮ್ಮನ್ನು ಹೈಕಮಾಂಡ್ ಎಂದು ಹೇಳಿಕೊಂಡರೆ, ಅವರನ್ನೇ ಹೈಕಮಾಂಡ್ ಎಂದು ಒಪ್ಪಿಕೊಳ್ಳೋಣ” ಎಂದು ವ್ಯಂಗ್ಯವಾಡಿದರು.
ಇದೇ ವೇಳೆ, ಶಾಸಕ ಶಿವಗಂಗ ಬಸವರಾಜ್ ಅವರು ಅಧಿಕಾರ ಹಂಚಿಕೆ ಕುರಿತಾಗಿ ಸ್ಪಷ್ಟತೆ ನೀಡಬೇಕೆಂದು ಹೇಳಿರುವ ಬಗ್ಗೆ ಕೇಳಿದಾಗ,
“ಬಸವರಾಜ್ ಅಥವಾ ಯತೀಂದ್ರ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ಏನಾದರೂ ಹೇಳಬೇಕಿದ್ದರೆ ಅದು ದೆಹಲಿಯಿಂದಲೇ ಬರಬೇಕು” ಎಂದು ಡಿಕೆ ಶಿವಕುಮಾರ್ ಹೇಳಿದರು.
ಈ ಹೇಳಿಕೆಗಳ ನಡುವೆ, ಕಾಂಗ್ರೆಸ್ ಪಕ್ಷದೊಳಗಿನ ಪವರ್ ಪಾಲಿಟಿಕ್ಸ್ ಹೊಸ ಹಂತಕ್ಕೆ ಪ್ರವೇಶಿಸಿರುವುದು ಸ್ಪಷ್ಟವಾಗಿದೆ. ಸಿಎಂ ಮುಂದುವರಿಕೆ ಕುರಿತು ಸಿಎಂ ಪುತ್ರ ಯತೀಂದ್ರ ಪುನಃ ಪುನಃ ಸ್ಪಷ್ಟನೆ ನೀಡುತ್ತಿದ್ದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತ್ರ ನಿರ್ಧಾರ ಸಂಪೂರ್ಣವಾಗಿ ಎಐಸಿಸಿ ಹೈಕಮಾಂಡ್ಗೇ ಸೇರಿದ್ದು ಎಂಬ ಸಂದೇಶವನ್ನು ನೀಡುತ್ತಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಈ ಬೆಳವಣಿಗೆಗಳು ದೆಹಲಿಯ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ನಿಂದ ಸ್ಪಷ್ಟ ನಿರ್ದೇಶನ ಹೊರಬರುವ ನಿರೀಕ್ಷೆ ಹೆಚ್ಚಾಗಿದೆ.
