ಬೆಂಗಳೂರು / ನವ ದೆಹಲಿ: ಕರ್ನಾಟಕ ಕಾಂಗ್ರೆಸ್ನೊಳಗಿನ ಬಹುಕಾಲದ ನಾಯಕತ್ವ ಚರ್ಚೆ ಮತ್ತೊಮ್ಮೆ ರಾಷ್ಟ್ರ ರಾಜಧಾನಿಗೆ ಸರಿದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿರುವುದು, ಪಕ್ಷದ ಒಳರಾಜಕೀಯದಲ್ಲಿ ಮತ್ತೆ ಕುರ್ಚಿ ಕಾಳಗದ ಚರ್ಚೆಗೆ ಇಂಧನ ನೀಡಿದೆ.
ದೆಹಲಿ ಭೇಟಿ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಅವರು “136” ಎಂಬ ಸಂಖ್ಯೆಯನ್ನು ಉಲ್ಲೇಖಿಸಿದ ವಿಡಿಯೋಗಳು ಮತ್ತು ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ನಡುವೆ, ಡಿಕೆಶಿ ಗೈರಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆಗಳ ಬಜೆಟ್ ಪೂರ್ವ ಸಭೆಗಳನ್ನು ನಡೆಸಿದ್ದಾರೆ.
#WATCH | Karnataka Deputy CM DK Shivakumar arrives in Delhi.
— ANI (@ANI) February 10, 2026
When asked about his loyalist leader claiming more than 80 MLAs in his (Deputy CM) support, he says, "136." pic.twitter.com/ukYmjEPHVZ
ದೆಹಲಿಗೆ ತೆರಳುವ ಮೊದಲು ಮಾತನಾಡಿದ ಡಿಕೆ ಶಿವಕುಮಾರ್, ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
“ನಾನು ಮತ್ತು ಸಿದ್ದರಾಮಯ್ಯನವರು ಏನು ಮಾತನಾಡಿದ್ದೇವೆ ಎಂಬುದು ನನಗೆ ಗೊತ್ತು. ನಾವು ಕದ್ದು ಮುಚ್ಚಿ ಮಾತಾಡಿಲ್ಲ. ಪಕ್ಷದ ಹಿರಿಯ ನಾಯಕರು ಎಲ್ಲರೂ ಇದ್ದಾಗಲೇ ಚರ್ಚೆ ನಡೆದಿದೆ,” ಎಂದು ಅವರು ಹೇಳಿದರು.
ಪಕ್ಷದ ಒಳಗಾಗಲಿ, ಹೊರಗಾಗಲಿ ನೀಡಲಾಗುತ್ತಿರುವ ಹೇಳಿಕೆಗಳು ಪಕ್ಷಕ್ಕೆ ಹಾನಿಯನ್ನೇ ಮಾಡುತ್ತವೆ ಎಂದು ಎಚ್ಚರಿಸಿದ ಡಿಕೆಶಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ಮೌನ ಪಾಲನೆ’ ಸಲಹೆಯನ್ನು ಪಾಲಿಸಬೇಕೆಂದು ಹೇಳಿದರು.
ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ಗೆ ವಿವರ ನೀಡುವುದು ಈ ಭೇಟಿಯ ಪ್ರಮುಖ ಉದ್ದೇಶ ಎನ್ನಲಾಗಿದೆ. ಅಸ್ಸಾಂ ಚುನಾವಣೆಗೆ ಸಂಬಂಧಿಸಿದ ಸಭೆಗಳೂ ದೆಹಲಿಯಲ್ಲಿ ನಡೆಯುತ್ತಿದ್ದು, ಡಿಕೆಶಿ ಭೇಟಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಹೈಕಮಾಂಡ್ ಕರೆಯಿದರೆ ದೆಹಲಿಗೆ ಹೋಗುತ್ತೇನೆ. ಪಕ್ಷದ ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೆ ಅದೇ ಅಂತಿಮ,” ಎಂದು ಹೇಳಿ, ಒಳರಾಜಕೀಯ ಚರ್ಚೆಗಳಿಂದ ದೂರ ಉಳಿಯುವ ಸಂದೇಶ ನೀಡಿದರು.
ದೆಹಲಿಯಲ್ಲಿ ಇರುವ ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಸಚಿವರು ಸಹ ಸಮತೋಲನದ ಹೇಳಿಕೆ ನೀಡುತ್ತಾ, ಸರ್ಕಾರದ ಗಮನ ಬಜೆಟ್ ಮತ್ತು ಆಡಳಿತದ ಮೇಲೆಯೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ವಿಚಾರದಲ್ಲಿ ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲೇ ಇದೆ ಎಂಬುದನ್ನೂ ಅವರು ಪುನರುಚ್ಚರಿಸಿದ್ದಾರೆ.
ಡಿಕೆ ಶಿವಕುಮಾರ್ ದೆಹಲಿಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಅವರು ನಡೆಸುವ ನಾಯಕತ್ವ ಮಟ್ಟದ ಮಾತುಕತೆಗಳ ಮೇಲೆ ಕರ್ನಾಟಕ ಕಾಂಗ್ರೆಸ್ ರಾಜಕೀಯದ ದಿಕ್ಕು ನಿರ್ಧಾರವಾಗುವ ನಿರೀಕ್ಷೆ ವ್ಯಕ್ತವಾಗಿದೆ.
