Home ರಾಜಕೀಯ DK Shivakumar Vs HD Kumaraswamy | ಕುಮಾರಸ್ವಾಮಿ ಎನ್ ಡಿಎಯಿಂದ ಆಚೆ ಬಂದು ನನಗೆ...

DK Shivakumar Vs HD Kumaraswamy | ಕುಮಾರಸ್ವಾಮಿ ಎನ್ ಡಿಎಯಿಂದ ಆಚೆ ಬಂದು ನನಗೆ ಬೆಂಬಲ ನೀಡುವ ಬಗ್ಗೆ ಮಾತನಾಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

42
0
DK Shivakumar
DK Shivakumar

ಬೆಂಗಳೂರು:

“ಕುಮಾರಸ್ವಾಮಿ ಅವರು ಎನ್ ಡಿಎ ಮೈತ್ರಿಕೂಟದವವರು. ನಮಗೂ ಎನ್ ಡಿಎಗೂ ಸಂಬಂಧವಿಲ್ಲ. ಮೊದಲು ಎನ್ ಡಿಎಯಿಂದ ಆಚೆ ಬಂದು ನಂತರ ಬೆಂಬಲದ ಬಗ್ಗೆ ಮಾತನಾಡಲಿ. ಅವರು ಬೆಂಬಲ ನೀಡುವ ಕಾಲದಲ್ಲೇ ಬೆಂಬಲ ನೀಡಲಿಲ್ಲ. ಈಗೇನು ಬೆಂಬಲ ನೀಡುತ್ತಾರೆ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

‘ಶಿವಕುಮಾರ್ ಅವರು ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ 19 ಶಾಸಕರ ಬೆಂಬಲ ನೀಡುತ್ತೇವೆ’ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕುಮಾರಕೃಪಾ ಅತಿಥಿ ಗೃಹದ ಬಳಿ ಶನಿವಾರ ಕೇಳಿದಾಗ ಈ ರೀತಿ ಉತ್ತರಿಸಿದರು.

“ಕುಮಾರಸ್ವಾಮಿ ಅವರ ಮಾತು ಕೇಳಿ ಬಹಳ ಸಂತೋಷವಾಗಿದೆ. ಸದ್ಯ ನಮಗೆ ರಾಜ್ಯದ ಜನತೆ 136 ಸೀಟು ಜತೆ ಅಧಿಕಾರ ಕೊಟ್ಟಿದ್ದಾರೆ. ಅವರು ಉತ್ತಮ ವಿರೋಧ ಪಕ್ಷದ ನಾಯಕನಾಗಿ ಸರ್ಕಾರವನ್ನು ತಿದ್ದುವ ಕೆಲಸ ಮಾಡಲಿ. ಟೀಕೆ ಮಾಡುವುದನ್ನು ಬಿಟ್ಟು, ಸರ್ಕಾರವನ್ನು ತಿದ್ದಲಿ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದೊಂದು ಬಾರಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಅವರ ತಂದೆಯವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಮಾಡಿದೆ. ಅವರಿಗಿರುವ ಅಪಾರ ಅನುಭವದ ಮೂಲಕ ನಮಗೆ ಮಾರ್ಗದರ್ಶನ ನೀಡಲಿ. ಈಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಮಸ್ಕಾರ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ, ಏನೆಲ್ಲಾ ಪ್ಲಾನ್ ಮಾಡಿದ್ದಾರೆ ಗೊತ್ತಿದೆ

ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಪ್ರೀತಿ ತೋರಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, “ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ, ದೆಹಲಿಯಲ್ಲಿ ಏನು ಮಾತನಾಡಿದ್ದಾರೆ, ಯಾರ್ಯಾರ ಬಳಿ ಏನೇನು ಮಾತನಾಡಿದ್ದಾರೆ, ನನ್ನ ವಿಚಾರದಲ್ಲಿ ಏನೇನು ದೊಡ್ಡ ಪ್ಲಾನ್ ಗಳು ನಡೆಯುತ್ತಿವೆ ಎಂಬುದು ನನಗೆ ಗೊತ್ತಿದೆ. ಅವರ ಜೊತೆಯಲ್ಲಿದ್ದವರೇ ನನಗೆ ಮಾಹಿತಿ ನೀಡಿದ್ದಾರೆ. ನಮಗೆ ಜನ ಆಶೀರ್ವಾದ ಮಾಡಿದ್ದು, ಅವರಿಗೆ ಉತ್ತಮ ಕೆಲಸ ಮಾಡೋಣ. ಕುಮಾರಸ್ವಾಮಿ ಅವರಿಗೆ ನಿಜಕ್ಕೂ ನನ್ನ ಮೇಲೆ ಪ್ರೀತಿ ಇದ್ದರೆ ಮೈತ್ರಿ ಸರ್ಕಾರ ಬಿದ್ದ ನಂತರ ನಡೆದ ಘಟನೆಗಳು, ಅವರು ಆಡಿರುವ ಮಾತುಗಳನ್ನು ನೆನಪು ಮಾಡಿಕೊಂಡು ತಮ್ಮ ಆತ್ಮಸಾಕ್ಷಿಗೆ ಉತ್ತರ ನೀಡಲಿ” ಎಂದು ತಿಳಿಸಿದರು.

2018ರಲ್ಲಿ ನೀವು ಮುಖ್ಯಮಂತ್ರಿ ಆಗುವ ಅವಕಾಶವಿತ್ತಾ ಎಂದು ಕೇಳಿದಾಗ, “ಈಗ ಆ ವಿಚಾರ ಬೇಡ. ರಾಜ್ಯದ ಜನ ನಮಗೆ ಏನು ತೀರ್ಪು ನೀಡಬೇಕೋ ನೀಡಿದ್ದಾರೆ, ಅವರಿಗೆ ಏನು ತೀರ್ಪು ನೀಡಬೇಕೋ ನೀಡಿದ್ದಾರೆ” ಎಂದು ತಿಳಿಸಿದರು.

ನನಗೆ ಯಾವ ಶಾಸಕರ ಬೆಂಬಲವೂ ಬೇಡ:

“ನನಗೆ ಸರ್ಕಾರದಲ್ಲಿ ಯಾರ ಶಾಸಕರ ಬೆಂಬಲವೂ ಬೇಡ. ನನ್ನ ಪರವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್ ಗೂ ಕೂಡ ನೋಟೀಸ್ ಜಾರಿ ಮಾಡುತ್ತೇನೆ. ನನ್ನ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಕ್ಷ ಚುನಾವಣೆ ನಡೆಸಿದ್ದು, ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ನಮಗೆ ಜನ ಆಶೀರ್ವಾದ ಮಾಡಿದ್ದು ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ನನಗೆ ಯಾವುದಕ್ಕೂ ಆತುರವಿಲ್ಲ. ನಾನು ಯಾರಿಗೂ ಬೆಂಬಲ ನೀಡಿಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಹೇಳಿದ್ದೇವೆ.

ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಧ್ಯಮಗಳು ತಿರುಚಿವೆ. ಸಿದ್ದರಾಮಯ್ಯ ನಮ್ಮ ನಾಯಕರು ನಾವು ಅವರ ನಾಯಕತ್ವ ಒಪ್ಪಿದ್ದೇವೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ” ಎಂದು ತಿಳಿಸಿದರು.

ರೈತ ಸಾಂತ್ವನ ಯಾತ್ರೆಗೆ ಕುಮಾರಸ್ವಾಮಿ ಅವರು ಮುಂದಾಗಿದ್ದು, ನೀವು ಅವರಿಗೆ ಕೈ ಜೋಡಿಸುತ್ತೀರಾ ಎಂದು ಕೇಳಿದಾಗ, “ನಾನು ಅವರ ಜತೆ ಯಾಕೆ ಕೈ ಜೋಡಿಸಲಿ. ಅವರು ಎನ್ ಡಿಎ ಭಾಗವಾಗಿದ್ದು, ಅವರು ಯಾತ್ರೆ ಮಾಡಿ ತಮ್ಮ ಎನ್ ಡಿಎ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸಲಿ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here