ಬೆಳಗಾವಿ: ಜೈಲಿನಿಂದ ಹಾಟ್ಲೈನ್ ಕರೆ ಬಂದಿರುವ ಕುರಿತು ತಮ್ಮ ಹೆಸರು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲೇ ಸ್ಪಷ್ಟನೆ ನೀಡಿದ್ದು, “ನನಗೆ ಜೈಲಿನಿಂದ ಯಾವುದೇ ಕರೆ ಬಂದಿಲ್ಲ. ನಾನು ಇಂತಹ ಹಾಟ್ಲೈನ್ ಕರೆಗಳನ್ನು ಸ್ವೀಕರಿಸುವುದೇ ಇಲ್ಲ” ಎಂದು ಖಚಿತವಾಗಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಅವರು, ಜೈಲಿನಲ್ಲಿ ಉಗ್ರರು ಸೇರಿದಂತೆ ಖೈದಿಗಳಿಗೆ ಮೊಬೈಲ್, ಟಿವಿ ಸೇರಿದಂತೆ ಸೌಲಭ್ಯ ನೀಡಲಾಗುತ್ತಿದ್ದು, ಜೈಲಿನಿಂದಲೇ ಹಾಟ್ಲೈನ್ ಕರೆಗಳು ಹೋಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರು ಪತ್ರಿಕೆಗಳಲ್ಲಿ ಬಂದಿದೆ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಪತ್ರಿಕೆಗಳಲ್ಲಿ ಏನು ಪ್ರಕಟವಾಗಿದೆಯೋ ಅದು ಅವರ ವಿಷಯ. ಆದರೆ ಅದನ್ನು ಇಲ್ಲಿ ಪ್ರಸ್ತಾಪಿಸಿ ನನ್ನ ಹೆಸರಿನೊಂದಿಗೆ ಬೇರೆ ರೀತಿಯ ಲಿಂಕ್ ಕಟ್ಟಬೇಡಿ. ನನಗೂ ಈ ವಿಷಯಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದರು.
ತಮ್ಮ ಅನುಭವವನ್ನು ಉಲ್ಲೇಖಿಸಿದ ಅವರು, “ನಾನು ಜೈಲು ಸಚಿವನಾಗಿದ್ದೆ. ಜೈಲಿನಲ್ಲಿ ಏನೆಲ್ಲ ನಡೆಯುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ಈ ಪ್ರಕರಣದಲ್ಲಿ ನನ್ನ ಮೇಲೆ ಅನುಮಾನ ಹುಟ್ಟಿಸುವಂತೆ ಮಾತನಾಡುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದರು.
“ಪತ್ರಿಕೆಗಳಲ್ಲಿ ಸಾವಿರಾರು ವಿಷಯಗಳು ಬರಬಹುದು. ಆದರೆ ಅದಕ್ಕೆ ನನ್ನನ್ನು ಜೋಡಿಸುವ ಪ್ರಯತ್ನ ಮಾಡಬಾರದು. ಈ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
