ಬೆಂಗಳೂರು: ಮೋಹನ್ ದಾಸ್ ಪೈ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ನಿಲುವನ್ನು ಸ್ಪಷ್ಟವಾಗಿ ಸಮರ್ಥಿಸಿಕೊಂಡಿದ್ದಾರೆ. “ಅವರು ನಮ್ಮ ಹಿರಿಯರು, ಸಲಹೆ ನೀಡಬಹುದು. ಆದರೆ ನನಗೆ ಬೆದರಿಕೆ ಹಾಕಲು, ಒತ್ತಡ ತರುವುದಕ್ಕೆ ಅಥವಾ ಬ್ಲ್ಯಾಕ್ಮೇಲ್ ಮಾಡಲು ಯಾರಿಗೂ ಅವಕಾಶ ಇಲ್ಲ,” ಎಂದು ಡಿಕೆಶಿ ಖಡಕ್ ಮಾತುಗಳನ್ನಾಡಿದರು.
ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳು ಮತ್ತು ಸಾಮಾನ್ಯ ನಾಗರಿಕರ ಹಿತವನ್ನು ರಕ್ಷಿಸುವ ಉದ್ದೇಶದಿಂದಲೇ ತಾವು ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದರು. “ನಾನು ಯಾರಿಗೋಸ್ಕರ ಕಾನೂನು ತರುತ್ತಿಲ್ಲ. ಯಾರಾದರೂ ತಪ್ಪು ಮಾಡಿದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದದು. ಜನರ ಹಿತವೇ ನನ್ನ ಮೊದಲ ಆದ್ಯತೆ,” ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ‘ರಫ್’ ಎನ್ನುವ ಅಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಹಳ್ಳಿಯವನಾಗಿದ್ದೇನೆ. ನೇರವಾಗಿ ಮಾತನಾಡುತ್ತೇನೆ. ಅದನ್ನು ರಫ್ ಅಂತ ಅರ್ಥ ಮಾಡಿಕೊಳ್ಳಬಾರದು. ನಮ್ರತೆಯಿಂದ ಕಲಿತು ಮುಂದೆ ಸಾಗೋಣ,” ಎಂದು ಹೇಳಿದರು.
ಹಿರಿಯರ ಸಲಹೆಗೆ ಗೌರವ ಇದ್ದರೂ, ಯಾವುದೇ ರೀತಿಯ ಅನಾವಶ್ಯಕ ಒತ್ತಡಗಳಿಗೆ ತಾವು ಜಗ್ಗುವುದಿಲ್ಲ ಎಂಬ ಸಂದೇಶವನ್ನು ಡಿಕೆಶಿ ಈ ಮೂಲಕ ನೀಡಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
