ಬೆಂಗಳೂರು: ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಪತ್ತೆಯಾಗಿವೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಮಗ್ರ ತನಿಖೆ ಹಾಗೂ ರಾಜ್ಯವ್ಯಾಪಿ ಮೊಟ್ಟೆ ಮಾದರಿ ಪರೀಕ್ಷೆಗೆ ಮುಂದಾಗಿದೆ.
ಇತ್ತೀಚಿನ ಕೆಲವು ವರದಿಗಳು ಮತ್ತು ಸಂಶೋಧನಾ ಉಲ್ಲೇಖಗಳ ಪ್ರಕಾರ, ಕೆಲವು ಮೊಟ್ಟೆಗಳಲ್ಲಿ ನೈಟ್ರೋಫ್ಯುರಾನ್ (Nitrofuran) ಎಂಬ ನಿಷೇಧಿತ ಆಂಟಿಬಯೋಟಿಕ್ ಔಷಧದ ಅವಶೇಷಗಳು ಪತ್ತೆಯಾಗಿವೆ ಎನ್ನಲಾಗಿದೆ. ನೈಟ್ರೋಫ್ಯುರಾನ್ ಮಾನವನ ದೇಹದ ಜೀವಕೋಶಗಳಿಗೆ ಹಾನಿ ಮಾಡುವುದರ ಜೊತೆಗೆ, ದೀರ್ಘಾವಧಿಯಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆ ಇರುವ ಅಂಶವೆಂದು ಪರಿಗಣಿಸಲಾಗಿದೆ.
ಮೊಟ್ಟೆ ಪ್ರತಿದಿನವೂ ಬಹುತೇಕ ಮನೆಗಳಲ್ಲಿ ಉಪಯೋಗಿಸುವ ಆಹಾರವಾಗಿರುವುದರಿಂದ, ಈ ವರದಿಗಳು ಮೊಟ್ಟೆ ತಿನ್ನುವುದು ಸುರಕ್ಷಿತವೇ? ಯಾವ ಮೊಟ್ಟೆ ತಿನ್ನಬೇಕು? ಎಂಬ ಗೊಂದಲವನ್ನು ಜನರಲ್ಲಿ ಹುಟ್ಟುಹಾಕಿವೆ. ಕೆಲವು ವಲಯಗಳಲ್ಲಿ, ಈ ಅಂಶಗಳು ಪೌಲ್ಟ್ರಿ ಫಾರ್ಮ್ಗಳಲ್ಲಿ ಕೋಳಿಗಳಿಗೆ ನೀಡಲಾಗುವ ಔಷಧಿಗಳು ಅಥವಾ ಇಂಜೆಕ್ಷನ್ಗಳ ದುರುಪಯೋಗದಿಂದ ಉಂಟಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆತುರದ ನಿರ್ಣಯಗಳಿಗೆ ಹೋಗಬಾರದು ಎಂದು ಸ್ಪಷ್ಟಪಡಿಸಿ, ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
“ಈ ವರದಿಗಳ ಹಿನ್ನೆಲೆ ಏನು, ಪರೀಕ್ಷೆಗಳನ್ನು ಯಾರು ನಡೆಸಿದ್ದಾರೆ, ಅವು ಯಾವ ಮಟ್ಟದಲ್ಲಿ ನಡೆದಿವೆ ಎಂಬ ಎಲ್ಲ ಮಾಹಿತಿಯನ್ನು ಮೊದಲು ಸಂಗ್ರಹಿಸಬೇಕಾಗಿದೆ. ನಂತರ ಆಹಾರ ಮತ್ತು ಔಷಧ ಆಯುಕ್ತರಿಂದ ಸಂಪೂರ್ಣ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದರು.
ನಿಜವಾಗಿಯೂ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಇದೇ ವೇಳೆ, ಜನರು ಅನಾವಶ್ಯಕವಾಗಿ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದ ಅವರು, “ವಾಸ್ತವಾಂಶಗಳನ್ನು ದೃಢಪಡಿಸಿದ ನಂತರವೇ ಅಂತಿಮ ತೀರ್ಮಾನಕ್ಕೆ ಬರಬೇಕು,” ಎಂದು ಹೇಳಿದರು.
ಈ ವಿವಾದದ ಹಿನ್ನೆಲೆ, ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಪರೀಕ್ಷಾ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
