ಬೆಂಗಳೂರು: ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೆ ತಡಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿ, ಮಾದಿಗ ಸಮುದಾಯದ ನಾಯಕರು ಆಗಸ್ಟ್ 1ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ನಗರದ ಹೋಟೆಲ್ ತಾಮರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, “ಕಳೆದ ವರ್ಷದ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಒಂದು ವರ್ಷವಾಗಿದೆ. ಆಗಸ್ಟ್ 10ರೊಳಗೆ ಕ್ಯಾಬಿನೆಟ್ ಒಳ ಮೀಸಲಾತಿ ತೀರ್ಮಾನ ಕೈಗೊಂಡಿಲ್ಲದಿದ್ದರೆ, ಕರ್ನಾಟಕ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. 4-5 ಸಾವಿರ ಜನರ ಸಭೆಯಲ್ಲಿ ಈ ನಿರ್ಧಾರ ಅಂತಿಮಗೊಳಿಸಲಾಗುತ್ತದೆ,” ಎಂದು ಎಚ್ಚರಿಸಿದರು.
ಅವರು, “ಅಸಹಕಾರ ಚಳವಳಿ ನಡೆಸುತ್ತೇವೆ. ಸರ್ಕಾರ ನಡೆಸಲು ಬಿಡುವುದಿಲ್ಲ. ಒಳ ಮೀಸಲಾತಿ ಜಾರಿ ಮಾಡದೆ ಇದ್ದದ್ದರಿಂದ ಕಾಂಗ್ರೆಸ್ ಸೋತಿತ್ತು ಎಂದು ಮುಖ್ಯಮಂತ್ರಿಯೇ ಹಿಂದೆ ಒಪ್ಪಿಕೊಂಡಿದ್ದರು. ಇದೇ ತಪ್ಪು ಮರುಕಳಿಸದಂತೆ ಮಾದಿಗರು ಹೋರಾಟ ತೀವ್ರಗೊಳಿಸಲಿದ್ದಾರೆ,” ಎಂದರು.
ನಾರಾಯಣಸ್ವಾಮಿ, ತೆಲಂಗಾಣದಲ್ಲಿ 1999ರಲ್ಲಿ ಮಾದಿಗರ ಒಳ ಮೀಸಲಾತಿ ಜಾರಿ ಮಾಡಲಾಗಿತ್ತು, ಆಂಧ್ರಪ್ರದೇಶ, ಪಂಜಾಬ್‌ನಲ್ಲಿ ಕೂಡ ಇದೇ ಮಾದರಿಯ ಮೀಸಲಾತಿ ಜಾರಿಯಾಗಿದೆ ಎಂದು ಉಲ್ಲೇಖಿಸಿ, “ಕರ್ನಾಟಕ ಸರ್ಕಾರ ಮಾತ್ರ ನೆಪ ಹುಡುಕುತ್ತಿದೆ,” ಎಂದು ಆರೋಪಿಸಿದರು.

ನಾಗಮೋಹನ್‌ದಾಸ್ ಆಯೋಗ 40 ದಿನಗಳಲ್ಲಿ ವರದಿ ಸಲ್ಲಿಸಬೇಕಾಗಿದ್ದರೂ 6 ತಿಂಗಳು ಕಳೆದರೂ ವರದಿ ಜಾರಿಗೆ ಬಂದಿಲ್ಲ. ಸರ್ಕಾರ ಆಯೋಗಕ್ಕೆ ಅಗತ್ಯ ಮಾಹಿತಿಯನ್ನೂ ನೀಡಿಲ್ಲ ಎಂದು ಅವರು ದೂರಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, “ಸರ್ಕಾರವು ಆಗಸ್ಟ್ 16ರಿಂದಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ‘ಮಾಡು ಇಲ್ಲವೇ ಮಡಿ’ ಹೋರಾಟ ಆರಂಭವಾಗುತ್ತದೆ,” ಎಂದು ಎಚ್ಚರಿಸಿದರು.
“2023ರ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ಭರವಸೆ ನೀಡಿತ್ತು. ಮೊದಲ ಸಂಪುಟ ಸಭೆಯಲ್ಲೇ ಅನುಮೋದನೆ ನೀಡುವುದಾಗಿ ಹೇಳಿತ್ತು. ಆದರೆ ಈಗ ನೆಪ ಹೇಳುತ್ತಾ ನಾಗಮೋಹನ್‌ದಾಸ್ ಸಮಿತಿ ವರದಿ ವಿಳಂಬ ಮಾಡುತ್ತಿದ್ದಾರೆ,” ಎಂದು ಕಾರಜೋಳ ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲು ವಿಫಲವಾಗಿದೆ ಎಂದು ಆರೋಪಿಸಿದ ಅವರು, “ನಾಲ್ಕು ವರ್ಷ ಹತ್ತು ತಿಂಗಳಾದರೂ ಪಂಚಾಯಿತಿ ಚುನಾವಣೆ ನಡೆಯುತ್ತಿಲ್ಲ. ಹಿಂದುಳಿದ ವರ್ಗಕ್ಕೆ ಏನು ನ್ಯಾಯ ನೀಡಿದ್ದೀರಿ?” ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ್, ಮುಖಂಡ ಸಂತೋಷ್ ಉಪಸ್ಥಿತರಿದ್ದರು.