ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುದೀರ್ಘ ತನಿಖೆಗೆ ಕಾನೂನಿನಲ್ಲಿ ಅವಕಾಶವಿದೆಯೇ?, ಸಿಆರ್‌ಪಿಸಿ ಅಡಿ ತನಿಖೆಗೆ ಕಾಲಮಿತಿ ಇಲ್ಲವೇ ಎಂದು ಸಿಬಿಐಗೆ ಹೈಕೋರ್ಟ್ ಪ್ರಶ್ನಿಸಿದೆ.
ಪ್ರಕರಣದ ತನಿಖೆಗಾಗಿ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸಿಬಿಐ ಪರ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ ಸರಕಾರವು ಸಿಬಿಐಗೆ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಡಿ.ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿಯು 2013-18ರ ಅವಧಿಯಲ್ಲಿ 74.93 ಕೋಟಿ ರೂಪಾಯಿಯಷ್ಟಿದ್ದು, ಶೇ. 49.13ರಷ್ಟಾಗಿದೆ. ಸಿಬಿಐ ತನಿಖೆ ರದ್ದತಿ ಕೋರಿ ಡಿ.ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಆನಂತರ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆಗೆ ಬಾಕಿ ಇದ್ದಾಗ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ. ಜನರಲ್ ಕ್ಲಾಸಸ್ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರಕಾರ ಹೊಂದಿದೆಯೇ?. ಒಂದೊಮ್ಮೆ ರಾಜ್ಯ ಸರಕಾರಕ್ಕೆ ಆ ಅಧಿಕಾರ ಇದೆ ಎಂದಾದರೆ ಸಿಬಿಐ ದಾಖಲಿಸಿರುವ ಎಫ್ಐಆರ್ ಗತಿ ಏನು?. ಜನರಲ್ ಕ್ಲಾಸಸ್ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರಕಾರಕ್ಕೆ ಇದೆ ಎಂದಾದರೂ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು ಎಂದರು.
3 ಅಕ್ಟೋಬರ್ 2020ಯಿಂದಲೂ ಸಿಬಿಐ ತನಿಖೆಯ ಅರ್ಜಿ ವಿಚಾರಣೆ ನಡೆಯುತ್ತಿದೆ. ಈಗಲೂ ತನಿಖೆ ಪ್ರಗತಿಯಲ್ಲಿದೆ ಎಂದು ಸಿಬಿಐ ವಕೀಲರ ಕೋರ್ಟ್ ಗಮನಕ್ಕೆ ತಂದರು. ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಎ.18 ಕ್ಕೆ ಮುಂದೂಡಿದೆ.