ಬೆಂಗಳೂರು:
ಗ್ಯಾಸ್ ಸಿಲಿಂಡರ್ ಗಳಿಗೆ ಪೂಜೆ ಸಲ್ಲಿಸುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ನಡೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸ್ವಾಗತಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಕಳೆದ ವಾರ ಬಜರಂಗಬಲಿ ದೇವಸ್ಥಾನಕ್ಕೆ ಬೇಟಿ ನೀಡಿದ್ದರು. ಇದೀಗ ಗ್ಯಾಸ್ ಸಿಲಿಂಡರ್ ಗಳಲ್ಲಿ ದೇವರನ್ನು ನೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲದರಲ್ಲೂ ಪೂಜೆ ಮಾಡುವುದನ್ನು ಶುರು ಮಾಡಿಕೊಂಡಿದೆ. ಹಿಂದೂ ತತ್ವದಲ್ಲಿ ಎಲ್ಲದರಲ್ಲೂ ದೇವರನ್ನು ನೋಡಲಾಗುತ್ತದೆ. ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷವು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಪ್ರಾರ್ಥನೆ ಸಲ್ಲಿಸುವುದನ್ನು ನಾವು ನಿಜವಾಗಿಯೂ ಸ್ವಾಗತಿಸುತ್ತೇವೆ. ಹೀಗಾದರೂ ಅವರು ಪೂಜೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮತದಾನ ಕುರಿತು ಮಾತನಾಡಿ, ಬಹಳಷ್ಟು ಯುವಕರು, ವಿಶೇಷವಾಗಿ ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದರು.
I voted with my Amma and Appa. Who did you go to vote with?
— Tejasvi Surya (@Tejasvi_Surya) May 10, 2023
Please reply with your voted pictures! #KarnatakaAssemblyElection2023 https://t.co/7XQ0RTfd0P
ಮತದಾನ ಕೇಂದ್ರಗಳಲ್ಲಿ, 80 ಮತ್ತು 90 ವರ್ಷದವರು, ಗಾಲಿಕುರ್ಚಿಗಳಲ್ಲಿ, ಊರುಗೋಲು ಹಿಡಿದು ಹೊರಬಂದು ಉತ್ಸಾಹದಿಂದ ಮತದಾನ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರನ್ನು ನೋಡಿದಾಗ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಇಂತಹವರು ಮತದಾನ ಮಾಡುತ್ತಿದ್ದಾರೆ ಎಂದರೆ, ನಮ್ಮನ್ನು ಮತದಾನ ಮಾಡದಂತೆ ಯಾವುದು ತಡೆಯಲು ಸಾಧ್ಯ. ಹೀಗಾಗಿ ಹೊರಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು.
ಬೆಂಗಳೂರಿನಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಶೇ.48-49ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬೇಕೆಂದು ಬಯಸುತ್ತಿದ್ದೇವೆ. ನಗರದ ಜನತೆ, ವಿದ್ಯಾವಂತರು ಹೊರಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.