ಬೆಂಗಳೂರು: ನಗರದಲ್ಲಿ ಭಾರೀ ಅನಾಹುತ ತಪ್ಪಿದ ಘಟನೆ ನಂದಿನಿ ಲೇಔಟ್ನಲ್ಲಿ ನಡೆದಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳಿಂದ ತುಂಬಿದ್ದ ಲಾರಿ ಪಲ್ಟಿಯಾದರೂ, ಕೂದಲಳೆಯ ಅಂತರದಲ್ಲಿ ಇಬ್ಬರು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಗೊಂಡಿದೆ.
ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಗ್ಗೆ ಸುಮಾರು 11.30ರ ವೇಳೆಗೆ ಗ್ಯಾಸ್ ಸಿಲಿಂಡರ್ಗಳನ್ನು ವಿತರಣೆ ಮಾಡಲು ತೆರಳುತ್ತಿದ್ದ ಲಾರಿ ನಂದಿನಿ ಲೇಔಟ್ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಕಾರಿಗೆ ಡಿಕ್ಕಿ ಹೊಡೆದ ನಂತರ ಲಾರಿ ಉರುಳಿರುವ ಶಂಕೆ ವ್ಯಕ್ತವಾಗಿದೆ.

ಲಾರಿ ಪಲ್ಟಿಯಾಗುವ ಕ್ಷಣದಲ್ಲಿ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಇಬ್ಬರು ಬೈಕ್ ಸವಾರರು ಪವಾಡದ ರೀತಿಯಲ್ಲಿ ಪಾರಾಗಿದ್ದಾರೆ. ಕೇವಲ ಒಂದು-ಎರಡು ಸೆಕೆಂಡ್ ವ್ಯತ್ಯಾಸವಾಗಿದ್ದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಪಲ್ಟಿಯಾದ ಲಾರಿಯಲ್ಲಿ ಗೃಹಬಳಕೆಯ ಅನಿಲ ಸಿಲಿಂಡರ್ಗಳು ತುಂಬಿಕೊಂಡಿದ್ದವು. ಲಾರಿ ಉರುಳಿದ ಬಳಿಕ ಹಲವು ಸಿಲಿಂಡರ್ಗಳು ರಸ್ತೆಗೆ ಚದುರಿದರೂ, ಯಾವುದೇ ಸಿಲಿಂಡರ್ ಸೋರಿಕೆ ಅಥವಾ ಸ್ಫೋಟ ಸಂಭವಿಸದಿರುವುದು ಮತ್ತೊಂದು ಅದೃಷ್ಟಕರ ಸಂಗತಿಯಾಗಿ ಪರಿಣಮಿಸಿದೆ. ತಕ್ಷಣ ಅಲರ್ಟ್ ಆದ ಸಿಬ್ಬಂದಿ ಗ್ಯಾಸ್ ಸೋರಿಕೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
#Karnataka #Bengaluru– A major accident was averted Videos👇of the accident in which a #LPG cylinders-laden truck lost control and #crashed in Nandini Layout. Two bikers escape miraculously, Only truck driver suffered injuries.#banglore pic.twitter.com/qpUgo9olmd
— Siraj Noorani (@sirajnoorani) March 28, 2026
ಅಪಘಾತದಲ್ಲಿ ಲಾರಿ ಚಾಲಕನ ಕೈಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹಾಗೂ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಕುರಿತು ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಬ್ರೇಕ್ ವೈಫಲ್ಯ, ಅತಿ ವೇಗ ಅಥವಾ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣವೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಗ್ಯಾಸ್ ಸಿಲಿಂಡರ್ಗಳಿಂದ ತುಂಬಿದ ಭಾರೀ ವಾಹನಗಳು ನಗರ ಪ್ರದೇಶಗಳಲ್ಲಿ ಸಂಚರಿಸುವಾಗ ಎಷ್ಟರ ಮಟ್ಟಿನ ಎಚ್ಚರಿಕೆ ಅಗತ್ಯವಿದೆ ಎಂಬ ಪ್ರಶ್ನೆಯನ್ನು ಮತ್ತೆ ಮುಂದಿರಿಸಿದೆ.
