ಬೆಂಗಳೂರು:
ಡಬಲ್ ಇಂಜಿನ್ ಸರ್ಕಾರವೆಂದರೆ, ಡಬಲ್ ಅಭಿವೃದ್ಧಿ ಮತ್ತು ಅಭಿವೃದ್ಧಿಯ ವೇಗ ಹೆಚ್ಚಿಸುವುದೇ ಆಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಎಂಬುದು ಕೇವಲ ಘೋಷಣೆಯಲ್ಲ. ಡಬಲ್ ಇಂಜಿನ್ ಸರ್ಕಾರವೆಂದರೆ ಅಭಿವೃದ್ಧಿಯ ವೇಗ, ಅಭಿವೃದ್ಧಿಯ ಪ್ರಮಾಣವಾಗಿದೆ. ರಾಜ್ಯಗಳ ಸಮನ್ವಯದೊಂದಿಗೆ ಆರ್ಥಿಕತೆ, ಮೂಲಸೌಕರ್ಯ ಮತ್ತು ಅಭಿವೃದ್ಧಿ ಸುಧಾರಿಸುವತ್ತ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ಕಳೆದ ಮೂರುವರೆ ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ನಿಜವಾದ ಅಭಿವೃದ್ಧಿಯಾಗಿದೆ. ವೇಗದ ಅಭಿವೃದ್ಧಿ ಸಾಧ್ಯವಾಗಿದೆ. ಜನಕೇಂದ್ರಿತ- ಜನಪರ ನೀತಿಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಜನವಿರೋಧಿ ಆಲೋಚನೆಯನ್ನು ಹೊಂದಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ, ಚತ್ತೀಸ್‍ಗಢದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ವೇಳೆ ಪ್ರಧಾನಿಯವರು ಆರೋಗ್ಯ ಮತ್ತು ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದ್ದರು. ಭಾರತ ಇಂದು ವಿಶ್ವದಲ್ಲೇ 5ನೇ ಪ್ರಬಲ ಆರ್ಥಿಕ ರಾಷ್ಟ್ರವೆನಿಸಿದೆ. ದೇಶದಲ್ಲಿ ಹಣದುಬ್ಬರ ದರ ಕಡಿಮೆಯಾಗಿದೆ. ಅಧಿಕ ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್‍ವಾಲ್ ಅವರು ಮಾತನಾಡಿ, ಕರ್ನಾಟಕ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇಡೀ ದೇಶದ ಒಟ್ಟು ವಿದೇಶಿ ನೇರ ಬಂಡವಾಳದಲ್ಲಿ ಕರ್ನಾಟಕದ ಪಾಲು ಶೇ.38ರಷ್ಟಿದೆ. ತಲಾದಾಯ 2.78 ಲಕ್ಷ ರೂ.ನಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂದ ಅಧಿಕವಾಗಿದೆ. ನಿರುದ್ಯೋಗ ಪ್ರಮಾಣ ಶೇ.2.39ರಷ್ಟಿದ್ದು, ಹಣದುಬ್ಬರ ಪ್ರಮಾಣ ಶೇ.3ಕ್ಕಿಂತ ಕಡಿಮೆ ಇದೆ ಎಂದು ಹೇಳಿದರು.
ಕರ್ನಾಟಕ, ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕೇಂದ್ರವೆನಿಸದೆ. ರಾಜ್ಯದಲ್ಲಿ 65 ವಿಶ್ವವಿದ್ಯಾಲಯಗಳಿದ್ದು, ನವೋದ್ಯಮಗಳು ಅಧಿಕ ಸಂಖ್ಯೆಯಲ್ಲಿ ಹೊರಹೊಮ್ಮುತ್ತಿವೆ. ಕೇಂದ್ರದ ಸಮಾಜ ಕಲ್ಯಾಣ ಯೋಜನೆಗಳು ಸೇರಿದಂತೆ ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳುತ್ತಿವೆ. ದಿಟ್ಟ ನಿರ್ಧಾರದಿಂದ ಇದು ಸಾಧ್ಯವಾಗಿದೆ. ಹಿಂದುಳಿದಿದ್ದ ಉತ್ತರ ಪ್ರದೇಶದಲ್ಲೂ ಡಬಲ್ ಇಂಜಿನ್ ಸರ್ಕಾರದಿಂದ ಇದೀಗ ಅಭಿವೃದ್ಧಿ ವೇಗ ಹೆಚ್ಚಿದೆ. ದೇಶ ಮತ್ತು ರಾಜ್ಯಗಳ ಪ್ರಗತಿಗೆ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲು ಜನರ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಮತ್ತು ರಾಜ್ಯ ಬಿಜೆಪಿ ವಕ್ತಾರರಾದ ಡಾ.ತೇಜಸ್ವಿನಿ ಗೌಡ ಮಾತನಾಡಿ, ಕಳೆದ ಮೂರೂವರೆ ವರ್ಷಗಳಲ್ಲಿ ಕರ್ನಾಟಕ ಅಗಾಧ ಪ್ರಗತಿಯನ್ನು ಸಾಧಿಸಿದ್ದು, ಇದೇ ವೇಗವನ್ನು ಮುಂದುವರಿಸಿಕೊಂಡು ಹೋಗಲು ಡಬಲ್ ಇಂಜಿನ್ ಸರ್ಕಾರ ಅತ್ಯಗತ್ಯವಾಗಿದೆ. ಈ ಚುನಾವಣೆಯಲ್ಲಿ ಜನರು ನಿರ್ಣಾಯಕ ಜನಾದೇಶ ನೀಡಲಿದ್ದಾರೆ. ವಿಶ್ವ ಆರ್ಥಿಕ ಬಿಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಭಾರತ ಹೆಚ್ಚಿನ ಆರ್ಥಿಕಾಭಿವೃದ್ಧಿ ಸಾಧಿಸಿದೆ ಎಂದು ಹೇಳಿದರು.