ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿಲ್ಲ, ಆಲೋಚನೆಯಲ್ಲಿ ಇದ್ದೇನೆ ಎಂದು ಡಾ. CN ಮಂಜುನಾಥ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕಾ, ಲೋಕಸಭೆಗೆ ನಿಲ್ಲಬೇಕಾ ಎಂದು ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ʻʻಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳ್ತಾ ಇದ್ದಾರೆ. ಆದರೆ, ನಾನು ಇನ್ನೂ ನಿರ್ಧಾರ ಮಾಡಿಲ್ಲ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳ್ತೀನಿʼʼ ಎಂದು ಅವರು ಹೇಳಿದರು.
ʻʻನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೇನೆ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ಲೋಕಸಭೆನೇ ಬೇರೆ ರಾಜಕೀಯವೇ ಬೇರೆ ಎನ್ನುವುದು ನನ್ನ ಅರ್ಥ. ಸದ್ಯ ಆಲೋಚನೆಯಲ್ಲಿ ಇದ್ದೇನೆ. ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳ್ತೀನಿʼʼ ಎಂದು ಅವರು ನುಡಿದರು.
ʻʻಆರೋಗ್ಯ ಕ್ಷೇತ್ರದಲ್ಲಿ ಜನಸೇವೆ ಮಾಡಿದ್ದೀರಿ ರಾಷ್ಟ್ರ ಮಟ್ಟದಲ್ಲಿ ಜನಸೇವೆಗೆ ಅವಕಾಶವಿದೆ ಹೋಗಿ ಎನ್ನುತ್ತಿದ್ದಾರೆ. ಒಂದು ಜಿಲ್ಲೆಗೆ ಹೋದಾಗ ಆ ಜಿಲ್ಲೆಯವರು ಹೇಳ್ತಾರೆ. ನಾಳೆ ಮೈಸೂರಿಗೆ ಹೋಗ್ತಾ ಇದೀನಿ. ಹೋದಲ್ಲಿ ಎಲ್ಲಾ ಅಲ್ಲಿ ನಿಲ್ಲುತ್ತೀರಾ ಅಂತಾರೆ ಜನರು. ನಾನು ರಾಜಕೀಯ ಕ್ಷೇತ್ರಕ್ಕೆ ಹೋಗಬೇಕಾ ಬೇಡ್ವಾ ಎನ್ನೋ ನಿರ್ಧಾರವೇ ಮಾಡಿಲ್ಲʼʼ ಎಂದು ಡಾ. ಮಂಜುನಾಥ್ ಹೇಳಿದ್ದಾರೆ.