ಬೆಂಗಳೂರು:
ರಾಜ್ಯದಲ್ಲಿ ಬರದಿಂದ ಅಂದಾಜು 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಮತ್ತು ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು, 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಹೇಳಿದ್ದಾರೆ.
ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಒಂದು ವಾರದೊಳಗೆ ಮನವಿ ಪತ್ರ ಸಲ್ಲಿಸಲಾಗುವುದು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ನಿಯಮಗಳ ಪ್ರಕಾರ ಒಟ್ಟು 5000 ರಿಂದ 6000 ಕೋಟಿ ರೂಪಾಯಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ.
‘ರಾಜ್ಯಾದ್ಯಂತ ಈ ವರ್ಷ ತೀವ್ರ ಮಳೆಯ ಕೊರತೆ ಉಂಟಾಗಿದ್ದು, ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅಂದಾಜು 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, 2 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ವಿವರಿಸಿದ್ದಾರೆ.
ಬರಪೀಡಿತ ತಾಲೂಕುಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸಲ್ಲಿಸಬೇಕಾದ ಮನವಿ ಪತ್ರವನ್ನು ತ್ವರಿತವಾಗಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮನವಿ ಪತ್ರ ಸಿದ್ಧಪಡಿಸುವ ಕಾರ್ಯ ಈಗಾಗಲೇ ಶೇ.70ರಷ್ಟು ಪೂರ್ಣಗೊಂಡಿದೆ. ಮೇವು, ಕುಡಿಯುವ ನೀರಿಗೆ ಪ್ರತ್ಯೇಕ ಪರಿಹಾರ ಪಡೆಯಲು ಅವಕಾಶವಿದ್ದು, ಮುಂದಿನ ಮೂರು ದಿನಗಳಲ್ಲಿ ಸಂಪೂರ್ಣ ಮನವಿ ಪತ್ರ ಸಿದ್ಧಪಡಿಸಲಾಗುವುದು ಎಂದರು.
ಮನವಿ ಪತ್ರ ಸಲ್ಲಿಕೆಯಾದ ಕೂಡಲೇ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೀಗಾಗಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ವಾರಾಂತ್ಯದೊಳಗೆ ಮನವಿ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕೇಂದ್ರದ ಬರ ಮಾರ್ಗಸೂಚಿಯಂತೆ 161 ತಾಲೂಕುಗಳಲ್ಲಿ ತೀವ್ರ ಬರವಿದ್ದು, 34ರಲ್ಲಿ ಭಾಗಶಃ ಬರವಿದೆ. ಉಳಿದ 41 ತಾಲೂಕುಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಮಾರ್ಗಸೂಚಿ ಪ್ರಕಾರ ಅಲ್ಲಿ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಈ ತಾಲೂಕುಗಳಲ್ಲಿನ ಬರ ಪರಿಸ್ಥಿತಿಯ ಕುರಿತು ಈ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದಿದ್ದಾರೆ.
ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ₹492 ಕೋಟಿ ಲಭ್ಯವಿದೆ. ಕುಡಿಯುವ ನೀರು ಪೂರೈಕೆ ಸೇರಿದಂತೆ ತುರ್ತು ಕೆಲಸಗಳಿಗೆ ಅನುದಾನದ ಕೊರತೆ ಇಲ್ಲ 13 ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 131 ಜನವಸತಿಗಳಲ್ಲಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 60 ವಾರ್ಡ್ ಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ವಿವರಿಸಿದರು.