
DySP Ganapathi
ಬೆಂಗಳೂರು, ಸೆ.25: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಕೇಶವನಾರಾಯಣ ಆಯೋಗ ನೀಡಿದ್ದ ಇಲಾಖಾ ತನಿಖೆಯ ಶಿಫಾರಸನ್ನು ಕರ್ನಾಟಕ ಸಚಿವ ಸಂಪುಟ ತಿರಸ್ಕರಿಸಿದೆ. ತನಿಖೆಯಲ್ಲಿ ಕೆಲವು ನ್ಯೂನ್ಯತೆಗಳಿದ್ದರೂ, ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವ ಅಗತ್ಯವಿಲ್ಲವೆಂದು ಸಚಿವ ಸಂಪುಟ ತೀರ್ಮಾನಿಸಿದೆ.
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ನಿರ್ಧಾರವನ್ನು ಘೋಷಿಸಿದರು.
ಹಳೆಯ ಆರೋಪಗಳಿಗೆ ವಿರಾಮ
2016ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊದಲು ಡಿ.ವೈ.ಎಸ್.ಪಿ ಎಂ.ಕೆ. ಗಣಪತಿ ನೀಡಿದ ಸಂದರ್ಶನದಲ್ಲಿ, ಅಂದಿನ ಗೃಹಸಚಿವ ಕೆ.ಜೆ. ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿ ವಿರುದ್ಧ ಅವರು ಮಾಡಿದ ಆರೋಪಗಳನ್ನು ಕೇಶವನಾರಾಯಣ ಆಯೋಗ ಸಮರ್ಥಿಸದಿದ್ದು, ಇವರಿಗೆ ಪ್ರಕರಣದಲ್ಲಿ ಹೊಣೆಗಾರಿಕೆ ಇಲ್ಲವೆಂದು ಸ್ಪಷ್ಟಪಡಿಸಿದೆ.
ಎಂ.ಕೆ. ಶ್ರೀವಾಸ್ತವ್ ವರದಿ ಪರಿಗಣನೆ
ಮಾಜಿ ಪೊಲೀಸ್ ಮಹಾನಿರ್ದೇಶಕ ಎಂ.ಕೆ. ಶ್ರೀವಾಸ್ತವ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಅಧ್ಯಯನ ವರದಿಯನ್ನೂ ಸಚಿವ ಸಂಪುಟ ಪರಿಗಣಿಸಿದೆ. ತಮ್ಮ ವರದಿಯಲ್ಲಿ ಅವರು, ಕರ್ನಾಟಕ ಹೈಕೋರ್ಟ್ ಸಿಬಿಐ ತನಿಖಾ ವರದಿಯನ್ನು ಮಾನ್ಯಗೊಳಿಸಿರುವುದು ಮತ್ತು ಸರ್ವೋಚ್ಚ ನ್ಯಾಯಾಲಯ ಎಸ್ಎಲ್ಪಿ ತಳ್ಳಿಹಾಕಿರುವುದು ಉಲ್ಲೇಖಿಸಿ, ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವ ಅಗತ್ಯವಿಲ್ಲವೆಂದು ಅಭಿಪ್ರಾಯಿಸಿದ್ದರು.
ಸಚಿವ ಸಂಪುಟದ ತೀರ್ಮಾನ
ಸಚಿವ ಎಚ್.ಕೆ. ಪಾಟೀಲ ಅವರು ಹೇಳುವಂತೆ:
- ಕೇಶವನಾರಾಯಣ ಆಯೋಗದ ವಿಭಾಗೀಯ ತನಿಖೆಯ ಶಿಫಾರಸು ತಿರಸ್ಕರಿಸಲಾಗಿದೆ.
- ಆಯೋಗದ ವರದಿ ಭಾಗಶಃ ಅಂಗೀಕರಿಸಲಾಗಿದೆ, ಆದರೆ ರಾಜಕೀಯ ನಾಯಕರ ಹಾಗೂ ಐಪಿಎಸ್ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಮಾನ್ಯತೆ ನೀಡಲಾಗಿಲ್ಲ.
“ಆಯೋಗದ ವರದಿಯನ್ನೂ, ಹೈಕೋರ್ಟ್ ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪುಗಳನ್ನೂ ಪರಿಗಣಿಸಿ ಸಚಿವ ಸಂಪುಟ ಈ ತೀರ್ಮಾನಕ್ಕೆ ಬಂದಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ,” ಎಂದು ಪಾಟೀಲ ಹೇಳಿದರು.