ಬೆಂಗಳೂರು ದಕ್ಷಿಣ (ರಾಮನಗರ): ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಕೇರಳದ ಕ್ಯಾಲಿಕಟ್ನಿಂದ ಬೆಂಗಳೂರಿಗೆ ಬರುತ್ತಿದ್ದ ಪಿಕೆ ಟ್ರಾವೆಲ್ಸ್ ಬಸ್ ಬೆಳಗಿನ ಜಾವ 4:10ರ ಸುಮಾರಿಗೆ ಚಾಲಕನ ನಿದ್ದೆ ಮಂಪರದಿಂದ ರಸ್ತೆ ಬದಿಯ ಫೆನ್ಸಿಂಗ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬಸ್ ಸುಮಾರು 100 ಮೀಟರ್ ದೂರ ಎಳೆದೊಯ್ದಿದ್ದು, ಮುಂಭಾಗ ಸಂಪೂರ್ಣ ನಾಶವಾಗಿದೆ.
ಮುಂಭಾಗದಲ್ಲಿ ಕುಳಿತಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು:
- ಮೊಹಮ್ಮದ್ ಫರಾನ್ (22), ಕಾಜಿಕೋಟ್
- ಸುಲ್ಫಿ (45), ಕೇರಳ
- ರಶೀದ್ (45), ಕಲಾಸಿಪಾಳ್ಯ, ಬೆಂಗಳೂರು
- ಸಾಕೇರ್, ಅಡುಗೋಡಿ
ಎಂದು ಗುರುತಿಸಲಾಗಿದೆ.
ಇನ್ನೂ ಹಲವರಿಗೆ ಗಾಯಗಳಾಗಿದ್ದು, ಕಣ್ಣೂರಿನ ಅಬ್ದುಲ್ ಹಾಗೂ ಅಲೇನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವೇಗ ಹಾಗೂ ನಿದ್ದೆ ಮಂಪರ ಎರಡೂ ಅಪಘಾತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
