Home ಬೆಂಗಳೂರು ನಗರ ಬೆಂಗಳೂರು/ಮೈಸೂರಿನಲ್ಲಿ ಕ್ಯಾಂಪಸ್ ತೆರೆಯಲು ಎಕಾಗ್ರಿಡ್ ವಿವಿ ಆಸಕ್ತಿ, 200 ಎಕರೆ ಜಮೀನಿಗೆ ಬೇಡಿಕೆ

ಬೆಂಗಳೂರು/ಮೈಸೂರಿನಲ್ಲಿ ಕ್ಯಾಂಪಸ್ ತೆರೆಯಲು ಎಕಾಗ್ರಿಡ್ ವಿವಿ ಆಸಕ್ತಿ, 200 ಎಕರೆ ಜಮೀನಿಗೆ ಬೇಡಿಕೆ

24
0
Ekagrid University interested in opening campus in Bangalore/Mysore, demands 200 acre land
Ekagrid University interested in opening campus in Bangalore/Mysore, demands 200 acre land

ಸ್ಯಾನ್ ಫ್ರಾನ್ಸಿಸ್ಕೊ/ಬೆಂಗಳೂರು:

ಸಂಶೋಧನಾಧಾರಿತವಾಗಿರುವ ಎಕಾಗ್ರಿಡ್ ವಿಶ್ವವಿದ್ಯಾಲಯವು ಬೆಂಗಳೂರು ಅಥವಾ ಮೈಸೂರಿನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಆಸಕ್ತಿ ತಾಳಿದ್ದು, ಇದಕ್ಕಾಗಿ ರಾಜ್ಯ ಸರಕಾರದಿಂದ 200 ಎಕರೆ ಜಮೀನು ಬೇಕೆಂದು ಕೇಳಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಮಂಗಳವಾರ ಈ ಸಂಬಂಧ ವಿಶ್ವವಿದ್ಯಾಲಯದ ಪ್ರತಿನಿಧಿಗಳಾದ ಪ್ರೊ.ಕೃಷ್ಣ ಸಾರಸ್ವತ್ ಮತ್ತು ಸಿಒಒ ಶೈಲೇಂದ್ರ ಕುಮಾರ್ ಅವರೊಂದಿಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2018ರಲ್ಲಿ ಭಾರತದಲ್ಲೇ ಕಾರ್ಯಾರಂಭ ಮಾಡಿರುವ ಎಕಾಗ್ರಿಡ್ ವಿಶ್ವವಿದ್ಯಾಲಯವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಗುರಿ ಹೊಂದಿದೆ. ಮುಂಬರುವ ದಿನಗಳಲ್ಲಿ ವಿ.ವಿ.ಯು ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಿದೆ. ಜತೆಗೆ ದೇಶದಲ್ಲಿ ಅದು ಅಗ್ರಶ್ರೇಣಿಯ ಮೊದಲ 25 ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದೆ. ಕರ್ನಾಟಕದಲ್ಲಿ ಇರುವ ಉನ್ನತ ಶಿಕ್ಷಣ ಕಾರ್ಯ ಪರಿಸರದಲ್ಲಿರುವ ಅತ್ಯುತ್ತಮ ನೀತಿಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಫಿಕ್ಟೀವ್ ಕಂಪನಿ ಜತೆ ಮಾತುಕತೆ

ಮೆಕ್ಯಾನಿಕಲ್ ಬಿಡಿಭಾಗಗಳ ಉತ್ಪಾದನೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಫಿಕ್ಟೀವ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಕೂಡ ಇದೇ ಸಂದರ್ಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಗ್ರ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಭಾರತದ ಪ್ರಧಾನ ಕಚೇರಿಯನ್ನು ತೆರೆದಿದೆ. ಕರ್ನಾಟಕದಲ್ಲಿ ಮೆಕ್ಯಾನಿಕಲ್ ಬಿಡಿಭಾಗಗಳ ಉತ್ಪಾದನೆಯನ್ನು ಬೆಂಬಲಿಸುವಂತಹ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಮಶೀನ್ ಲರ್ನಿಂಗ್ ಮೂಲಕ ತಂತ್ರಜ್ಞಾನದ ಬಲ ನೀಡುವ ಕುರಿತು ವಿಚಾರ ವಿನಿಮಯ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಭೇಟಿಯಲ್ಲಿ ವೈಮಾಂತರಿಕ್ಷ, ಮಶೀನ್ ಟೂಲ್ಸ್, ಆಟೋ/ಇ.ವಿ., ಮತ್ತು ಕೈಗಾರಿಕಾ ಕ್ರಾಂತಿ 4.0 ಕ್ಷೇತ್ರಗಳಲ್ಲಿ ಇಡಬಹುದಾದ ಹೆಜ್ಜೆಗಳನ್ನು ಕುರಿತು ಪರಸ್ಪರ ಆಸಕ್ತಿಗಳನ್ನು ಹಂಚಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಾತುಕತೆಯಲ್ಲಿ ಕಂಪನಿಯ ಪರವಾಗಿ ಸಿಎಫ್ಒ ಎಡ್ಡೀ ಚೆನ್, ನಿರ್ದೇಶಕ ಆ್ಯಡಂ ರೋಡ್ಸ್ ಉಪಸ್ಥಿತರಿದ್ದರು. ರಾಜ್ಯ ಸರಕಾರದ ನಿಯೋಗದಲ್ಲಿ ಸಚಿವರ ಜತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

LEAVE A REPLY

Please enter your comment!
Please enter your name here