ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವದ ಸಧೃಡಗೊಳಿಸಲು ಸಹಾಯವಾಗುವಂತೆ ಹಾಗೂ ಚುನಾವಣಾ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದಲ್ಲಿ ಸಂಬಂಧಿತ ಚುನಾವಣಾಧಿಕಾರಿಗಳು ನಿಯಮಿತವಾಗಿ ರಾಜಕೀಯ ಪಕ್ಷಗಳ ಸಭೆ ನೆಡೆಸುವ ಮೂಲಕ ಚುನಾವಣಾ ಕಾನೂನುಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ಕರೆ ನೀಡಿದರು.
ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ನವದೆಹಲಿಯ ಭಾರತೀಯ ಪ್ರಜಾಪ್ರಭುತ್ವ ನಿರ್ವಹಣಾ ಸಂಸ್ಥೆ (IIIDEM) ಯಲ್ಲಿ ಇಂದು ಹಮ್ಮಿಕೊಂಡಿದ್ದ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಎರಡು ದಿನಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ದೇಶಾದ್ಯಂತ ಸಿಇಒಗಳು, ಡಿಇಒಗಳು, ಇಆರ್‍ಒಗಳು, ಬಿಎಲ್‍ಒಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು. ಪ್ರಜಾಪ್ರತಿನಿಧಿ ಕಾಯ್ದೆ 1950 ಮತ್ತು 1951; ಮತದಾರರ ನೋಂದಣಿ ನಿಯಮಗಳು 1960 ಹಾಗೂ ಚುನಾವಣಾ ನಿಯಮಗಳು 1961 ಮತ್ತು ಕಾಲಕಾಲಕ್ಕೆ ಭಾರತ ಚುನಾವಣಾ ಆಯೋಗ ಹೊರಡಿಸಿದ ಸೂಚನೆಗಳ ಪ್ರಕಾರ ಶಾಸನಬದ್ಧವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ರಾಜಕೀಯ ಪಕ್ಷಗಳ ಮನವಿಗಳಿಗೆ ಕಾನೂನು ಚೌಕಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಬೇಕು. ಎಲ್ಲಾ ಶಾಸನಬದ್ಧ ಹಂತಗಳಲ್ಲಿ ರಾಜಕೀಯ ಪಕ್ಷಗಳ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು. ಸಂಬಂಧಪಟ್ಟ ಪ್ರಾಧಿಕಾರದಿಂದ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಮಾರ್ಚ್ 31 ರೊಳಗೆ ತಮ್ಮ ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು, ಆರ್‍ಒಎಸ್, ಇಆರ್‍ಒಗಳು ಚುನಾವಣಾ ಕಾನೂನುಗಳು ಮತ್ತು ಆಯೋಗ ಕಾಲ-ಕಾಲಕ್ಕೆ ಆದೇಶಿಸುವ ಸೂಚನೆಗಳನ್ನು ಸ್ಪಷ್ಟವಾಗಿ ಅರಿತಿರಬೇಕು. ಎಲ್ಲಾ ಬಿಎಲ್‍ಒಗಳಿಗೆ ಮತದಾರರೊಂದಿಗೆ ಸೌಜನ್ಯದಿಂದ ವರ್ತಿಸಲು ತರಬೇತಿ ನೀಡಬೇಕು ಮತ್ತು ಯಾವುದೇ ಚುನಾವಣಾ ಸಿಬ್ಬಂದಿ ಅಥವಾ ಅಧಿಕಾರಿಗಳು ಭಯಮುಕ್ತ ವಾತಾವರಣದಲ್ಲಿ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬೇಕು.
ಪ್ರತಿ ಮತಗಟ್ಟೆಯಲ್ಲಿ 800-1200 ಮತದಾರರು ಇರಬೇಕು. ಮತದಾರರ ನಿವಾಸದಿಂದ 2 ಕಿ.ಮೀ ಅಂತರದೊಳಗೆ ಮತಗಟ್ಟೆಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಗ್ರಾಮೀಣ ಮತ್ತು ಕೊಳಚೆ ನಿರ್ಮೂಲನಾ ಪ್ರದೇಶಗಳಲ್ಲಿ ಉತ್ತಮ ಕನಿಷ್ಟ ಮೂಲಭೂತ ಸೌಕರ್ಯಗಳಿರುವ ಮತಗಟ್ಟೆಗಳನ್ನು ಸ್ಥಾಪಿಸಬೇಕು. ಇದು ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ 28 ವಿಭಿನ್ನ ಪಾಲುದಾರರನ್ನು ಗುರುತಿಸಿದೆ, ಇದರಲ್ಲಿ ಸಿಇಒಗಳು, ಡಿಇಒಗಳು, ಇಆರ್‍ಒಗಳು ಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತಗಟ್ಟೆ ಏಜೆಂಟ್‍ರು ಹಾಗೂ ಇತರರು ಸೇರಿದ್ದಾರೆ. ಆಯೋಗದ ನಾಲ್ಕು ಡಿಇಸಿಗಳ ಮಾರ್ಗದರ್ಶನದಲ್ಲಿ, ಮತದಾರರ ಪಟ್ಟಿ, ಚುನಾವಣೆಗಳ ನಡವಳಿಕೆ, ಮೇಲ್ವಿಚಾರಣೆ/ಜಾರಿ ಮತ್ತು ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಎಂಬ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಗುರುತಿಸಲಾದ 28 ಪಾಲುದಾರರಲ್ಲಿ ಪ್ರತಿಯೊಬ್ಬರ ಸಾಮರ್ಥ್ಯ ಬಲಪಡಿಸುವ ಗುರಿಯನ್ನು ಆಯೋಗವು ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಭಾರತ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಸ್ಥಾಪಿತ ಕಾನೂನು ಚೌಕಟ್ಟಿನೊಳಗೆ ದೇಶದಲ್ಲಿ ಚುನಾವಣಾ ನಿರ್ವಹಣೆಯಲ್ಲಿ ಸುಧಾರಣೆಗಳಿಗೆ ದಾರಿ ಮಾಡಿಕೊಡುವ ವಿಷಯಗಳ ಕುರಿತು ಸಿಇಒಗಳೊಂದಿಗೆ ಸಂವಾದ ನಡೆಸಿದರು.