ಬೆಂಗಳೂರು : ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಇಂದಿನಿಂದ ಬಿಎಲ್‍ಒ ತಂತ್ರಾಂಶದ ಮೂಲಕ ಮನೆ-ಮನೆ ಸಮೀಕ್ಷೆ ಪ್ರಾರಂಭಿಸಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮತದಾರರ ಪಟ್ಟಿಯ ಎಲ್ಲ ಕಾರ್ಯಚಟುವಟಿಕೆಗಳು ಆರಂಭವಾಗಿರುತ್ತದೆ. ಪ್ರತಿ ವರ್ಷ 1ನೆ ಜನವರಿಗೆ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡಿಸಿ ಪಟ್ಟಿ ತಯಾರಿಸಿ ಪ್ರಕಟಣೆ ಮಾಡುತ್ತೇವೆ ಎಂದರು.
ಇಂದಿನಿಂದ ಅ.18ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. 29ನೇ ಅಕ್ಟೋಬರ್ 2024 ರಂದು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಗೊಳಿಸಲಿದ್ದು, 2025ರ ಜ.6ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಮನೆ-ಮನೆ ಸಮೀಕ್ಷೆ ವೇಳೆ ಬೂತ್ ಮಟ್ಟದಲ್ಲಿ ಹೊಸ ಮನೆಗಳು ಬಂದಿದ್ದರೆ, ಅಲ್ಲಿ ಯಾರು ಹೊಸಬರು ಬಂದಿದ್ದಾರೆ ಅಥವಾ ಸ್ಥಳದಲ್ಲಿದ್ದವರು ಬೇರೆ ಕಡೆ ಹೋಗಿದ್ದಾರೆ ಅದೆಲ್ಲಾ ಮಾಹಿತಿಯನ್ನು ಪಡೆದು ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು. ಬೇರೆ ಕಡೆ ಹೋಗಿರುವ ಹಾಗೂ ಮೃತಪಟ್ಟಂತಹ ಅನರ್ಹರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುವುದು ಎಂದು ಹೇಳಿದರು.
ಚುನಾವಣಾ ಆಯೋಗದ ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಫ್ಲಿಕೇಷನ್(ವಿಹೆಚ್‍ಎ) ಮತ್ತು ವೋಟರ್ ಸರ್ವೀಸ್ ಪೋರ್ಟಲ್(ವೆಬ್ ಅಫ್ಲಿಕೇಷನ್)ಗಳನ್ನು ಬಳಸಿ ಆನ್ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮತದಾರರಿಗೆ ನೊಂದಾವಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮತದಾರರ ಪರಿಷ್ಕೃತ ಪಟ್ಟಿಯನ್ನು ಸಿದ್ದಪಡಿಸಲು ನಾಲ್ಕು(4) ಅರ್ಹತಾ ದಿನಾಂಕಗಳನ್ನು(ಜ.1, ಎ.1, ಜು.1 ಮತ್ತು ಅ.1) ನಿಗಧಿಪಡಿಸಲಾಗಿದೆ ಎಂದರು.
ಮತಗಟ್ಟೆಗಳ ಪರಿಶೀಲನೆ: ನಗರದಲ್ಲಿ ಸುಮಾರು 9000 ಮತಗಟ್ಟೆಗಳಿದ್ದು, ಮತಗಟ್ಟೆಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮತಗಟ್ಟೆಗಳಿಗೆ ಅನುಗುಣವಾಗಿ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ ಎಂದರು.
ನಿಯೋಜನೆ ಮಾಡಿರುವಂತಹ ಬೂತ್ ಮಟ್ಟದ ಅಧಿಕಾರಿಗಳು ಯಾರಾದರು ವರ್ಗಾವಣೆಯಾಗಿದ್ದರೆ ಅಥವಾ ಆರೋಗ್ಯ ಸಮಸ್ಯೆಯಿದ್ದರೆ ಅಂತಹವರ ಸ್ಥಳಕ್ಕೆ ಬೇರೆಯವರನ್ನು ನಿಯೋಜಿಸಿ ವಿವರಗಳುಳ್ಳ ಮಾಹಿತಿಯನ್ನು ಸಂಗ್ರಹಿಸಿ ವೆಬ್‍ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿ ಸ್ನೇಹಲ್, ದಯಾನಂದ್, ಅವಿನಾಶ್ ಮೆನನ್ ರಾಜೇಂದ್ರನ್, ರಾಜಕೀಯ ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.