
Elephant chased during safari in Chamarajanagar, author Bhagwan narrowly escapes
ಚಾಮರಾಜನಗರ:
ಖ್ಯಾತ ಲೇಖಕ ಕೆಎಸ್ ಭಗವಾನ್ ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ ವರದಿಯಾಗಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ವಿಚಾರವಾದಿ ಕೆ.ಎಸ್.ಭಗವಾನ್ ಹಾಗೂ ಇತರರು ಸಫಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಆನೆಯೊಂದು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಸಫಾರಿ ವಾಹನ ಚಾಲಕನ ಮುಂಜಾಗ್ರತೆಯಿಂದ ವಾಹನದಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಫಾರಿ ವಾಹನ ಸಾಗುತ್ತಿದ್ದ ಹಾದಿಗೆ ಆನೆಯೊಂದು ಅಡ್ಡಬಂದಿದೆ. ಭಗವಾನ್ ಇದ್ದ ವಾಹನವನ್ನು ನೋಡಿ ಸಿಟ್ಟಿಗೆದ್ದ ಅದು ಕೂಡಲೇ ಓಡಿಸಿಕೊಂಡು ಬಂದಿದೆ. ಕೂಡಲೇ ವಾಹನ ಚಾಲಕನು ವಾಹನಕ್ಕೆ ರಿವರ್ಸ್ ಗೇರ್ ಹಾಕಿ, ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಸ್ವಲ್ಪ ದೂರ ಬಂದಿದ್ದಾರೆ. ವಾಹನವು ಹಿಮ್ಮುಖಕ್ಕೆ ಚಲಿಸಿದ ಕೂಡಲೇ ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಬಂದ ಆನೆಯು ಆನಂತರ ತನ್ನ ಪಾಡಿಗೆ ತಾನು ಶಾಂತಗೊಂಡು ಮುಂದಕ್ಕೆ ನಡೆದಿದೆ. ವಾಹನದತ್ತ ಧಾವಿಸಿಬಂದಿದ್ದು ಹೆಣ್ಣಾನೆ ಎಂದು ವಾಹನ ಚಾಲಕರು ತಿಳಿಸಿದ್ದಾರೆ.
ನಾವು ಹೋಗುವಾಗ ಆನೆಯ ಹಿಂಡು ಅಡ್ಡ ಬಂದಿತು. ಹಿಂಡಿನಲ್ಲಿ ಒಟ್ಟು 6 ಆನೆಗಳಿದ್ದವು. ಹಿಂಡಿನಲ್ಲಿ ಒಂದು ಪುಟಾಣಿ ಆನೆ ಮರಿಯೂ ಇತ್ತು. ಆ ಮರಿಯಿದ್ದರಿಂದ ನಮ್ಮ ವಾಹನವನ್ನು ನೋಡಿದ ಕೂಡಲೇ ಹೆಣ್ಣಾನೆಗೆ ಸಿಟ್ಟುಬಂದು ನಮ್ಮನ್ನು ಹೆದರಿಸಿತು. ಕಾಡು ಪ್ರಾಣಿಗಳದ್ದು ಸಹಜ ವರ್ತನೆ ಎಂದು ಅವರು ಹೇಳಿದರು.