ಬೆಂಗಳೂರು: ಬೆಂಗಳೂರು ಮೆಟ್ರೋ ದರ ಏರಿಕೆ ವಿರುದ್ಧ ಸಂಕೇತಾತ್ಮಕ ಪ್ರತಿಭಟನೆ ನಡೆಸಿದ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ತಾತ್ಕಾಲಿಕವಾಗಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಜಯನಗರ ಮೆಟ್ರೋ ನಿಲ್ದಾಣದಲ್ಲಿ ‘ಖಾಲಿ ಟ್ರಂಕ್’ ಹಿಡಿದುಕೊಂಡು ಹಾಜರಾದ ತೇಜಸ್ವಿ ಸೂರ್ಯ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆರ್ಥಿಕ ದುರಾಡಳಿತವೇ ಮೆಟ್ರೋ ದರ ಏರಿಕೆಗೆ ಕಾರಣವಾಗಿದ್ದು, ಪ್ರಯಾಣಿಕರ ಮೇಲೆ ಹಣಕಾಸಿನ ಭಾರ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಗೂ ಮುನ್ನ, ಕರ್ನಾಟಕ ಹೈಕೋರ್ಟ್ ಆದೇಶದಂತೆ ಪ್ರತಿಭಟನೆಗಳಿಗೆ ಫ್ರೀಡಂ ಪಾರ್ಕ್ ಮಾತ್ರವೇ ನಿಗದಿತ ಸ್ಥಳ ಎಂದು ಉಲ್ಲೇಖಿಸಿ, ಬೆಂಗಳೂರು ಪೊಲೀಸರು ತೇಜಸ್ವಿ ಸೂರ್ಯರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೂ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಕೆಲಕಾಲ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಬಂಧನ ಸಂದರ್ಭದಲ್ಲೇ ಮಾತನಾಡಿದ ತೇಜಸ್ವಿ ಸೂರ್ಯ, “ಮೆಟ್ರೋದಲ್ಲಿ ಪ್ರಯಾಣ ಮಾಡುವುದೇ ಅಪರಾಧವೇ? ನಮ್ಮನ್ನು ಯಾವ ಕಾನೂನಿನ ಅಡಿಯಲ್ಲಿ ಬಂಧಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ” ಎಂದು ಪೊಲೀಸರನ್ನು ಪ್ರಶ್ನಿಸಿದರು.
ಬಿಡುಗಡೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಮೆಟ್ರೋಗೆ ಬಜೆಟ್ ಮೂಲಕ ‘ಶಾಡೋ ಕ್ಯಾಶ್ ಸಪೋರ್ಟ್’ ನೀಡುತ್ತಿದ್ದ ಕಾರಣ ದರಗಳು ನಿಯಂತ್ರಣದಲ್ಲಿ ಇದ್ದವು. ಆದರೆ ಪ್ರಸ್ತುತ ಸರ್ಕಾರ ತನ್ನ ಆರ್ಥಿಕ ಸ್ಥಿತಿ ದುರ್ಬಲವಾಗಿದೆ ಎಂದು ಹೇಳಿ ಆ ಸಹಾಯವನ್ನು ಹಿಂಪಡೆದ ಪರಿಣಾಮ ದರ ಏರಿಕೆ ನಡೆದಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಒತ್ತಾಯದಿಂದ ಮೆಟ್ರೋ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಸ್ವಾಗತಿಸಿದ ತೇಜಸ್ವಿ ಸೂರ್ಯ, ಇದು ಶಾಶ್ವತ ಪರಿಹಾರವಲ್ಲ ಎಂದು ಹೇಳಿದರು. ಮುಂದಿನ ಬಜೆಟ್ ಅಧಿವೇಶನದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದರು.
“ಬೆಂಗಳೂರು ನಾಗರಿಕರ ಹಿತಕ್ಕಾಗಿ, ಕೈಗೆಟುಕುವ ಸಾರ್ವಜನಿಕ ಸಾರಿಗೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ,” ಎಂದು ತೇಜಸ್ವಿ ಸೂರ್ಯ ಹೇಳಿದರು.
ಈ ಪ್ರತಿಭಟನೆಯಲ್ಲಿ ಜಯನಗರ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಸೇರಿದಂತೆ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
