Home ಬೆಂಗಳೂರು ನಗರ Day Care Chemotherapy| ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಸ್ಥಾಪನೆ...

Day Care Chemotherapy| ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಸ್ಥಾಪನೆ : ದಿನೇಶ್ ಗುಂಡೂರಾವ್

53
0
Dinesh Gundu Rao addressing media

ಬೆಂಗಳೂರು : ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ನಾಳೆ(ಮೇ 23) ಮೈಸೂರಿನಲ್ಲಿ ಕೀಮೋಥೆರಪಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಸಮೀಪದ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಲಭವಾಗಿ, ಗುಣಮಟ್ಟದ ಕೀಮೋಥೆರಪಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.

ಕೇಂದ್ರ ಸರಕಾರ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಸಕ್ತ ಬಜೆಟ್‍ನಲ್ಲಿ ಘೋಷಣೆ ಮಾಡಿದೆ. ಆದರೆ ನಮ್ಮ ಸರಕಾರ ಹಿಂದಿನ ಬಜೆಟ್‍ನಲ್ಲಿಯೇ ಕೇಂದ್ರಗಳನ್ನು ತೆರೆಯುವುದಾಗಿ ಹೇಳಿತ್ತು. ಹೀಗಾಗಿ 16 ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವ ಇದೆ ಎಂದು ಅವರು ತಿಳಿಸಿದರು.

Establishment of day care chemotherapy center in 16 district hospitals of the state : Dinesh Gundurao

ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ತಪಾಸಣೆಯನ್ನು ಮಾಡುವುದಿಲ್ಲ. ಆದರೆ ನೋಂದಾಯಿತ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಳನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ತೃತೀಯ ಹಂತದ ಆಸ್ಪತ್ರೆಗಳು ಮತ್ತು ಸರಕಾರದ ನಡುವಿನ ಒಪ್ಪಂದದ ಮೂಲಕ ಹಬ್-ಅಂಡ್-ಸ್ಪೋಕ್ ಮಾದರಿಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳು ಹಬ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸಲಿವೆ. ಆಸ್ಪತ್ರೆಗಳಲ್ಲಿಯೇ ಸ್ಥಾಪಿಸಿದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳು ಸ್ಪೋಕ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಒಂದು ವರ್ಷದ ಅವಧಿಯ ಒಪ್ಪಂದ, ಮುಂದಿನ ವರ್ಷಗಳಿಗೆ ವಿಸ್ತರಣೆ ಆಗಲಿವೆ ಎಂದು ಅವರು ತಿಳಿಸಿದರು.

ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳು ಕ್ಯಾನ್ಸರ್ ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡಲಿವೆ. ಹಾಗೆಯೇ ಔಷಧಿಗಳನ್ನು ತಯಾರಿಸಿ, ಸ್ಪೋಕ್ ಕೇಂದ್ರಗಳಿಗೆ ರವಾನಿಸಲಿವೆ. ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಹಬ್‍ನೊಂದಿಗೆ ಸಮನ್ವಯ ಸಾಧಿಸಿ, ರೋಗಿಯ ಆರೈಕೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಒಬ್ಬ ವೈದ್ಯಕೀಯ ಆಂಕೋಲಾಜಿಸ್ಟ್, ಕೀಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ ಇಬ್ಬರು ದಾದಿಯರು ಸೇರಿದಂತೆ ಮತ್ತಿತರರು ಇರುತ್ತಾರೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here