ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಲಂಚ ಮತ್ತು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯೊಳಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಮಂಗಳವಾರ ನಡೆದ ವಿಧಾನಸಭೆ ಕಲಾಪದಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅಬಕಾರಿ ಸಚಿವ ತಿಮ್ಮಾಪುರ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿ, ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದರು.
ಇದರಿಂದ ಆಕ್ರೋಶಗೊಂಡ ವಿಪಕ್ಷ ನಾಯಕ ಆರ್. ಅಶೋಕ್, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಸರ್ಕಾರಕ್ಕೆ ಸ್ವಲ್ಪವಾದರೂ ನಾಚಿಕೆ ಮತ್ತು ಮಾನಮರ್ಯಾದೆ ಇದ್ದರೆ, ತಕ್ಷಣವೇ ಅಬಕಾರಿ ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಈ ಮಧ್ಯೆ ದಿನದ ಕಲಾಪಗಳನ್ನು ಪೂರ್ಣಗೊಳಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸದನವನ್ನು ಫೆಬ್ರವರಿ 4ಕ್ಕೆ ಮುಂದೂಡಿದರು. ಸದನ ಮುಂದೂಡಿಕೆಯಾದ ತಕ್ಷಣವೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿ, ರಾತ್ರಿಪೂರ್ತಿ ಸತ್ಯಾಗ್ರಹ ನಡೆಸಿದರು.
ಧರಣಿ ವೇಳೆ ರಾಜ್ಯ ಸರ್ಕಾರ, ಅಬಕಾರಿ ಸಚಿವ ತಿಮ್ಮಾಪುರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಅಹೋರಾತ್ರಿ ಧರಣಿಗೆ ವಿಪಕ್ಷ ನಾಯಕ ಆರ್. ಅಶೋಕ್, ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಹಿರಿಯ ಸದಸ್ಯರಾದ ಆರಗ ಜ್ಞಾನೇಂದ್ರ, ಸುರೇಶ್ ಕುಮಾರ್, ಜೆಡಿಎಸ್ನ ಸುರೇಶ್ ಬಾಬು ಸೇರಿದಂತೆ ಹಲವಾರು ಬಿಜೆಪಿ–ಜೆಡಿಎಸ್ ಶಾಸಕರು ಸಾಥ್ ನೀಡಿದರು.
ರಾಜಕೀಯ ವಾತಾವರಣ ಇನ್ನಷ್ಟು ಕಗ್ಗಂಟಾಗುವ ಲಕ್ಷಣಗಳಿದ್ದು, ವಿಧಾನಸಭೆ ಮರುಕೂಡುವ ವೇಳೆ ಈ ವಿಚಾರ ಮತ್ತಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ.
