ಬೆಂಗಳೂರು: ನಗರದ ವೈಟ್ಫೀಲ್ಡ್ ಪ್ರದೇಶದಲ್ಲಿ ನಿಲ್ಲಿಸಿದ್ದ ಹೆಲಿಕಾಪ್ಟರ್ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಹೆಲಿಕಾಪ್ಟರ್ ಸ್ಮಾರ್ಟ್ ವಿಂಗ್ಸ್ ಏವಿಯೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ್ದು, ಅದರ ನಿರ್ವಹಣೆಯನ್ನು ಇಂಡೋಕಾಪ್ಟರ್ ಎಂಬ ಖಾಸಗಿ ಕಂಪನಿಗೆ ವಹಿಸಲಾಗಿತ್ತು.
ದೂರು ಪ್ರಕಾರ, ಹೆಲಿಕಾಪ್ಟರ್ನ ಅತ್ಯಂತ ಮಹತ್ವದ ಡ್ಯುಯಲ್ ಕಂಟ್ರೋಲ್ ಸೆಟ್ ಯಂತ್ರವನ್ನು ಕಳ್ಳತನ ಮಾಡಲಾಗಿದೆ. ಈ ಘಟನೆಯ ಹಿಂದೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಕಂಪನಿಯ ಸಿಬ್ಬಂದಿ ಕೈವಾಡ ಇರಬಹುದು ಎಂಬ ಅನುಮಾನವನ್ನು ಕಂಪನಿ ವ್ಯಕ್ತಪಡಿಸಿದೆ.
ಕಳ್ಳತನಕ್ಕೆ ಸಂಬಂಧಿಸಿದಂತೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ನಿರ್ವಹಣಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.


ಇತ್ತ, ಲಕ್ಷಾಂತರ ರೂಪಾಯಿ ಮೌಲ್ಯದ ವಿಮಾನ ಬಿಡಿಭಾಗ ಕಳ್ಳತನದಿಂದ ತೀವ್ರ ಕಳವಳ ವ್ಯಕ್ತಪಡಿಸಿರುವ ಸ್ಮಾರ್ಟ್ ವಿಂಗ್ಸ್ ಏವಿಯೇಶನ್, ಇದು ಕೇವಲ ಆರ್ಥಿಕ ನಷ್ಟವಲ್ಲದೆ ವಾಯುಯಾನ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಈ ರೀತಿಯ ಕಳ್ಳತನ ಪ್ರಕರಣಗಳು ರಾಷ್ಟ್ರೀಯ ಭದ್ರತೆ ಮತ್ತು ವಿಮಾನ ಸುರಕ್ಷತೆ ದೃಷ್ಟಿಯಿಂದ ಗಂಭೀರವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ಹೊರಬೀಳುವ ಸಾಧ್ಯತೆ ಇದೆ.
