ಬೆಂಗಳೂರು, ಆಗಸ್ಟ್ 15: ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಲ್ಸನ್ ಗಾರ್ಡನ್ ಚಿನ್ನಯ್ಯನಪಾಳ್ಯದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಲ್ಲಿ 8 ವರ್ಷದ ಬಾಲಕ ಸಾವನ್ನಪ್ಪಿ, ಹಲವರಿಗೆ ಗಾಯಗಳಾಗಿವೆ.
ಮೃತ ಬಾಲಕನನ್ನು ಮುಬಾರಕ್ (8) ಎಂದು ಗುರುತಿಸಲಾಗಿದ್ದು, ಗಾಯಾಳುಗಳಲ್ಲಿ ಕಸ್ತೂರಮ್ಮ (35), ಸರಸಮ್ಮ (50), ಶಬ್ರೀನಾ ಬಾನು (35), ಸುಬ್ರಮಣಿ (62), ಶೇಖ್ ನಜೀದುಲ್ಲಾ (37), ಫಾತಿಮಾ (8) ಹಾಗೂ ಕಯಾಲ್ (8) ಸೇರಿದ್ದಾರೆ. ಗಾಯಾಳುಗಳನ್ನು ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಯಾಲ್‌ಗೆ ವಿಕ್ಟೋರಿಯಾ ಆಸ್ಪತ್ರೆ ಬರ್ನ್ಸ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟ ಕಸ್ತೂರಮ್ಮ ಅವರ ಮನೆಯಲ್ಲಿ ಸಂಭವಿಸಿದ್ದು, ಮೃತ ಮುಬಾರಕ್ ಅವರು ಪಕ್ಕದ ಮನೆಯಲ್ಲಿ ವಾಸವಿದ್ದರು. ಸ್ಫೋಟದ ತೀವ್ರತೆಯಿಂದ ಮೊದಲ ಮಹಡಿಯ ಗೋಡೆ ಮತ್ತು ಛಾವಣಿ ಕುಸಿದು ಬಿದ್ದು, 8ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಡುಗೋಡಿ ಪೊಲೀಸರು ಇದು ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಪ್ರಾಥಮಿಕ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಥಳೀಯರು ಸ್ಫೋಟದ ಶಬ್ದ ಅತಿ ಭಾರಿಯಾಗಿದ್ದರಿಂದ ಬೇರೆ ಕಾರಣವಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. “ಸ್ಫೋಟದ ಶಬ್ದ ಬಹಳ ಭಾರಿಯಾಗಿತ್ತು, ಕೆಲವರ ತಲೆ ಮತ್ತು ಕೈಗೆ ಗಂಭೀರ ಪೆಟ್ಟಾಗಿದೆ,” ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಪ್ರದೇಶದ ಹಲವರು ಬೆಳಿಗ್ಗೆ ಲಾಲ್‌ಬಾಗ್ ಉದ್ಯಾನವನದಲ್ಲಿ ತೋಟಗಾರಿಕೆ ಕೆಲಸಕ್ಕೆ ತೆರಳಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಫೋಟಗೊಂಡ ಮನೆ ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.