HC warns Facebook its operations would be shut down if it does not cooperate with police investigation
ಬೆಂಗಳೂರು:
ಸೌದಿ ಅರೇಬಿಯಾದಲ್ಲಿರುವ ಭಾರತೀಯ ಪ್ರಜೆ ಬಂಧನ ಪ್ರಕರಣದ ತನಿಖೆಗೆ ರಾಜ್ಯ ಪೊಲೀಸರೊಂದಿಗೆ ಸಹಕಾರ ತೋರದ ಹಿನ್ನೆಲೆಯಲ್ಲಿ ದೇಶದಲ್ಲಿ ಫೇಸ್ ಬುಕ್ ಚಟುವಟಿಕೆಗಳನ್ನು ಬಂದ್ ಮಾಡುವ ಆದೇಶವನ್ನು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಬುಧವಾರ ಫೇಸ್‌ಬುಕ್‌ಗೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಬಿಕರ್ನಕಟ್ಟೆ ನಿವಾಸಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿದೆ. “ಅಗತ್ಯ ಮಾಹಿತಿಯೊಂದಿಗೆ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ಪೀಠವು ಫೇಸ್‌ಬುಕ್‌ಗೆ ನಿರ್ದೇಶಿಸಿದೆ.
ಸುಳ್ಳು ಪ್ರಕರಣದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಿರುವ ಪ್ರಕರಣದಲ್ಲಿ ಯಾವ ಕ್ರಮ ಪ್ರಾರಂಭಿಸಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು, ಮಂಗಳೂರು ಪೊಲೀಸರು ಕೂಡ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.
ಪತಿ ಶೈಲೇಶ್ ಕುಮಾರ್ (52) ಸೌದಿ ಅರೇಬಿಯಾದಲ್ಲಿ 25 ವರ್ಷಗಳಿಂದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ತಾನು ತಮ್ಮ ಮಕ್ಕಳೊಂದಿಗೆ ತಮ್ಮ ಸ್ವಂತ ಊರಿನಲ್ಲಿ ವಾಸಿಸುತ್ತಿದ್ದಾಗಿ ಎಂದು ಕವಿತಾ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಶೈಲೇಶ್ ಕುಮಾರ್ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಸಂದೇಶವನ್ನು ಹಾಕಿದ್ದರು ಆದರೆ ಅಪರಿಚಿತರು ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರಬೀಯಾದ ರಾಜ ಮತ್ತು ಇಸ್ಲಾಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣ ಕುಮಾರ್ ಮನೆಯವರಿಗೆ ಮಾಹಿತಿ ನೀಡಿದ್ದು, ಕವಿತಾ ಮಂಗಳೂರಿನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ, ಸೌದಿ ಪೊಲೀಸರು ಶೈಲೇಶ್ ಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ.
ತನಿಖೆ ಕೈಗೆತ್ತಿಕೊಂಡಿರುವ ಮಂಗಳೂರು ಪೊಲೀಸರು ಫೇಸ್‌ಬುಕ್‌ಗೆ ಪತ್ರ ಬರೆದು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ಫೇಸ್‌ಬುಕ್ ಪೊಲೀಸರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2021 ರಲ್ಲಿ, ಅರ್ಜಿದಾರರು ತನಿಖೆಯ ವಿಳಂಬವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕವಿತಾ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು.
