ಐಪಿಎಲ್ ಟಿಕೆಟ್ ಹೆಸರಿನಲ್ಲಿ ವಂಚನೆ: ಆರ್ಸಿಬಿ ಅಭಿಮಾನಿಗಳಿಗೆ ಎಚ್ಚರಿಕೆ, ನಕಲಿ ಲಿಂಕ್ಗಳಿಂದ ಹಣ ದೋಚಾಟ
ಬೆಂಗಳೂರು: ಐಪಿಎಲ್ ಟಿಕೆಟ್ ಹೆಸರಿನಲ್ಲಿ ಆನ್ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ವಿಶೇಷವಾಗಿ ಆರ್ಸಿಬಿ ಅಭಿಮಾನಿಗಳು ಮೋಸ ಹೋಗುತ್ತಿರುವ ಹಿನ್ನೆಲೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಅಪರಾಧಿಗಳು “ಐಪಿಎಲ್ ಧಮಾಕಾ ಸೇಲ್” ಸೇರಿದಂತೆ ವಿವಿಧ ಆಫರ್ ಹೆಸರಿನಲ್ಲಿ ನಕಲಿ ವೆಬ್ಸೈಟ್ ಹಾಗೂ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳನ್ನು ಸೃಷ್ಟಿಸಿ, ಟಿಕೆಟ್ ನೀಡುವಂತೆ ಹೇಳಿ ಜನರನ್ನು ಮೋಸಗೊಳಿಸುತ್ತಿದ್ದಾರೆ.
ಈ ಲಿಂಕ್ಗಳನ್ನು ಕ್ಲಿಕ್ ಮಾಡಿ ಟಿಕೆಟ್ ಬುಕ್ ಮಾಡಲು ಯತ್ನಿಸಿದಾಗ, ಹಣ ಖಾತೆಯಿಂದ ಕಡಿತವಾಗುತ್ತದೆ ಆದರೆ ಯಾವುದೇ ಟಿಕೆಟ್ ದೊರೆಯುವುದಿಲ್ಲ. ಈ ಕುರಿತು ಹಲವರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ಈ ನಕಲಿ ವೆಬ್ಸೈಟ್ಗಳು ಅಧಿಕೃತ ಆರ್ಸಿಬಿ ವೆಬ್ಸೈಟ್ನಂತೆಯೇ ಕಾಣುವಂತೆ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಬೇಡಿಕೆಯ ನಡುವೆ ಜನರು ಸುಲಭವಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನರಾಯಣ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಯಾವುದೇ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು ಹಾಗೂ ಟಿಕೆಟ್ ಖರೀದಿ ಮಾಡುವಾಗ ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ಬಳಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕೆಲವರು ₹7,196, ₹11,991 ಮತ್ತು ₹7,497 ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ಮೋಸದ ಮೊತ್ತ ಇನ್ನಷ್ಟು ಹೆಚ್ಚಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಸೈಬರ್ ಕ್ರೈಂ ಪ್ರಕರಣ ದಾಖಲಾಗಿದ್ದು, ನಕಲಿ ಅಕೌಂಟ್ಗಳು ಮತ್ತು ವೆಬ್ಸೈಟ್ಗಳನ್ನು ಬ್ಲಾಕ್ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ಕೂಡ ಈ ಕುರಿತು ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ಸಾರ್ವಜನಿಕರು ಯಾವುದೇ ಅಪರಿಚಿತ ಲಿಂಕ್ಗಳನ್ನು ನಂಬದೇ, ಅಧಿಕೃತ ಮೂಲಗಳನ್ನೇ ಪರಿಶೀಲಿಸಿ ವ್ಯವಹಾರ ನಡೆಸುವಂತೆ ಪೊಲೀಸರು ಸೂಚಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
