ಬೆಂಗಳೂರು:
ದ್ವಿಪತ್ನಿತ್ವ ಕೇಸಲ್ಲಿ ಕುಟುಂಬಸ್ಥರ ವಿಚಾರಣೆ ಅಸಾಧ್ಯ. ತಪ್ಪಿತಸ್ಥರ ವಿರುದ್ಧ ಮಾತ್ರ ಕಾನೂನು ಕ್ರಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮರು ಮದುವೆ, ವಂಚನೆ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಮ್ಮ ಕುಟುಂಬ ಸದಸ್ಯರನ್ನೂ ಸೇರಿಸಿ ದಾಖಲಿಸಿರುವ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಶ್ರೀನಿವಾಸ್ ಸಾಗರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈಗಾಗಲೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ತಮ್ಮ ಮಗಳನ್ನು ಮರು ಮದುವೆಯಾಗದ್ದಾನೆ. ಜತೆಗೆ ಆಸ್ತಿ ಖರೀದಿಸಲು ಹಣ ಪಡೆದಿದ್ದಾನೆ ಎಂದು ಶ್ರೀನಿವಾಸ್ ಸಾಗರ್ ವಿರುದ್ಧ 2ನೇ ಪ್ರತಿವಾದಿ ಖಾಸಗಿ ದೂರು ದಾಖಲಿಸಿದ್ದರು.
ಕುಟುಂಬ ಸದಸ್ಯರೆಲ್ಲರೂ ಶ್ರೀನಿವಾಸ್ ಜತೆ ಮಗಳ ವಿವಾಹ ಮಾಡುವ ಸಾಮಾನ್ಯ ಉದ್ದೇಶ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಲಯ ಸಿಆರ್ಪಿಸಿ ಸೆಕ್ಷನ್ 153(ಸಿ) ಅನ್ವಯ ತನಿಖೆಗೆ ಶಿಫಾರಸು ಮಾಡಿತ್ತು. ಸಾಕ್ಷ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಶ್ರೀನಿವಾಸ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಐಪಿಸಿ ಸೆಕ್ಷನ್ 494, 495 ಮತ್ತು 496ರ ಅಡಿ ಎಲ್ಲ ಆರೋಪಗಳನ್ನು ಮೊದಲ ಆರೋಪಿಯಾಗಿರುವ ಶ್ರೀನಿವಾಸ್ ವಿರುದ್ಧ ಮಾತ್ರ ಮಾಡಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಇಲ್ಲ. ಇನ್ನು ಸೆಕ್ಷನ್ 498ಎಗೆ ಸಂಬಂಧಿಸಿದಂತೆ ಮೊದಲ ಆರೋಪಿ ಹಣ ಪಡೆದಿರುವ ಕುರಿತಿದ್ದು, ಇದು ಕುಟುಂಬದ ಇತರ ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿಯಲ್ಲಿ 2ನೇ ಪ್ರತಿವಾದಿಯಾಗಿರುವ ವ್ಯಕ್ತಿಯು ಆರೋಪಿಗೆ ಮಾವನಾಗಿದ್ದಾರೆ. ಆದ್ದರಿಂದ ಈ ಸೆಕ್ಷನ್ಗಳ ಅನ್ವಯ ಪ್ರಕರಣದಲ್ಲಿ ನೇರವಾಗಿ ನೊಂದ ವ್ಯಕ್ತಿಯಲ್ಲ. ಪತಿ ವಿರುದ್ಧ ಪತ್ನಿ ನೇರವಾಗಿ ದೂರು ದಾಖಲಿಸಿಲ್ಲ. ಖಾಸಗಿ ದೂರು ದಾಖಲಿಸುವ ಮುಖೇನ ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.